ಆ್ಯಷಸ್ ಟ್ರೋಫಿ ಜೊತೆಗೆ ಆಸ್ಟ್ರೇಲಿಯಾ ನಾಯಕ ಸ್ವೀವನ್ ಸ್ಮಿತ್ ಹಾಗೂ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
ಚಿತ್ರ :@Akaran_1
ಟೆಸ್ಟ್ ಕ್ರಿಕೆಟ್‌ನ ಪ್ರತಿಷ್ಠಿತ ಸರಣಿಯಾಗಿರುವ ಆ್ಯಷಸ್ ಟೆಸ್ಟ್ ಆರಂಭವಾಗಿದೆ. ಮೊದಲ ಟೆಸ್ಟ್ ಮುಕ್ತಾಯಗೊಂಡಿದ್ದು, ಆ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದು ಸರಣಿಯಲ್ಲಿ 1–0 ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಈ ಸರಣಿಗೆ ಆ್ಯಷಸ್ ಎಂಬ ಹೆಸರು ಯಾಕೆ ಬಂತು?
ಆ್ಯಷಸ್ ಎಂದರೆ ‘ಬೂದಿ’ ಎಂದರ್ಥ. ಈ ಬೂದಿ ಪದವನ್ನು ಯಾಕೆ ಪ್ರತಿಷ್ಠಿತ ಸರಣಿಗೆ ನೀಡಲಾಯಿತು ಎಂಬುದನ್ನು ನೋಡೋಣ.
ನಾವು ಈ ಮಾಹಿತಿ ತಿಳಿಯಲು 1882 ಆಗಸ್ಟ್ 29ರಂದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ನಡೆದ ಘಟನೆಯನ್ನು ತಿಳಿದುಕೊಳ್ಳಬೇಕು. ಅಂದು ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಇದು ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾಗೆ ಸಿಕ್ಕ ಮೊದಲ ಟೆಸ್ಟ್ ಗೆಲುವಾಗಿತ್ತು.
ಈ ಸೋಲು ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟು ಮಾಡಿತ್ತು. ‘ಇಂಗ್ಲಿಷ್ ಕ್ರಿಕೆಟ್ ಸತ್ತಿದೆ ಅದರ ದೇಹವನ್ನು ದಹಿಸಿ ಬೂದಿಯನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗುತ್ತಿದೆ’ ಎಂದು ಬ್ರಿಟಿಷ್ ಪತ್ರಿಕೆಯಾದ ದಿ ಸ್ಪೋರ್ಟಿಂಗ್ ಟೈಮ್ಸ್ ವರದಿ ಮಾಡಿತ್ತು. ಈ ವರದಿ ಇಂಗ್ಲೆಂಡ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಮತ್ತು ಇದೇ ವೇಳೆ 'ಆ್ಯಷಸ್' (ಬೂದಿ) ಎಂಬ ಪದವು ಜನಪ್ರಿಯವಾಯಿತು.
ಈ ಘಟನೆಯ ಬಳಿಕ 1882-83ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮುಂದಿನ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಈ ಗೆಲುವನ್ನು ಸಂಭ್ರಮಿಸಲು ಆಸ್ಟ್ರೇಲಿಯಾದ ಕೆಲ ಮಹಿಳೆಯರು ಇಂಗ್ಲಿಷ್ ನಾಯಕ ಐವೊ ಬ್ಲೈಗ್ ಅವರಿಗೆ ಒಂದು ಚಿಕ್ಕ ಬೂದಿಯ ಗಡಿಗೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಬೂದಿಯನ್ನು ಕ್ರಿಕೆಟ್ ಬೈಲ್ (ಸ್ಟಂಪ್ಸ್)ನ ಭಸ್ಮವೆಂದು ಹೇಳಲಾಗುತ್ತದೆ. ಈ ಗಡಿಗೆಯು ಇಂದಿಗೂ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಸಂಗ್ರಹಿಸಲಾಗಿದೆ ಮತ್ತು ಇದನ್ನೇ ಆ್ಯಷಸ್ ಸರಣಿಯ ಟ್ರೋಫಿಯಾಗಿ ಪರಿಗಣಿಸಲಾಯಿತು.
ಅಂದಿನಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು 'ದಿ ಆ್ಯಷಸ್' ಎಂದೇ ಹೆಸರಿಡಲಾಗಿದೆ. ಈ ಹೆಸರು ಕೇವಲ ಒಂದು ಸರಣಿಯ ಹೆಸರಲ್ಲ, ಬದಲಿಗೆ ಎರಡು ರಾಷ್ಟ್ರಗಳ ನಡುವಿನ ತೀವ್ರ ಸ್ಪರ್ಧೆಯ ಸಂಕೇತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.