ADVERTISEMENT

ICC World Cup 2023: ಮೊದಲ ಪಂದ್ಯದಲ್ಲಿ ಅಶ್ವಿನ್‌ಗೆ ಅವಕಾಶ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 16:08 IST
Last Updated 5 ಅಕ್ಟೋಬರ್ 2023, 16:08 IST
–ಆರ್‌. ಅಶ್ವಿನ್‌
–ಆರ್‌. ಅಶ್ವಿನ್‌   

ಚೆನ್ನೈ: ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರು ಗುರುವಾರ ಭಾರತ ತಂಡದ ತಾಲೀಮಿನಲ್ಲಿ ಹೆಚ್ಚು ಅವಧಿಯನ್ನು ಕಳೆದರು. ಅವರು ತೊಡಗಿಸಿಕೊಂಡ ರೀತಿ ನೋಡಿದರೆ,  ಭಾನುವಾರ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಲಿರುವ ಭಾರತ ತಂಡದಲ್ಲಿ ಆಡುವ ಸಾಧ್ಯತೆ ಹೆಚ್ಚಿರುವಂತೆ ಕಾಣುತ್ತಿದೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಅಶ್ವಿನ್ ಅವರು ರವೀಂದ್ರ ಜಡೇಜ, ಕುಲದೀಪ್ ಜೊತೆಗೆ ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಡೇವಿಡ್ ವಾರ್ನರ್‌ ಮತ್ತು ಸ್ಟೀವ್ ಸ್ಮಿತ್ ವಿರುದ್ಧ ಅವರ ದಾಖಲೆ ಉತ್ತಮವಾಗಿರುವುದೂ ಅವರಿಗೆ ಆಯ್ಕೆಗೆ ಪೂರಕ ಆಗಬಲ್ಲದು. ಅಶ್ವಿನ್‌ ಅವರು ಟೆಸ್ಟ್‌ ಪಂದ್ಯಗಳಲ್ಲಿ 11 ಸಲ ವಾರ್ನರ್‌ ಅವರ ವಿಕೆಟ್‌ ಪಡೆದಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಸ್ಥಿರತೆಯ ಆಟಕ್ಕೆ ಹೆಸರಾಗಿರುವ ಸ್ಮಿತ್‌ ಕೂಡ ಟೆಸ್ಟ್‌ ಪಂದ್ಯಗಳಲ್ಲಿ ಅಶ್ವಿನ್ ಅವರ ಎದುರು ಪರದಾಡಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಬದಲು ಅಶ್ವಿನ್ ಅವರು ಅವಕಾಶ ಪಡೆದರೆ ಅಚ್ಚರಿಯೇನೂ ಇಲ್ಲ.

ADVERTISEMENT

ಅಕ್ಷರ್ ಪಟೇಲ್ ಬದಲು ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿರುವ ಚೆನ್ನೈನ ಆಟಗಾರ, ನೆಟ್ಸ್‌ನಲ್ಲಿ ಹೆ್ಚ್ಚುವರಿ ಅವಧಿಗೆ ಬೌಲ್ ಮಾಡಿದರು. ಶ್ರೇಯಸ್‌ ಅಯ್ಯರ್‌, ಇಶಾನ್ ಕಿಶನ್, ಶಾರ್ದೂಲ್ ಅವರಿಗೆ ಬೌಲಿಂಗ್ ಮಾಡಿದರು. ಬೌಲಿಂಗ್ ಮೊದಲು ಅವರು ಬ್ಯಾಟ್‌ ಕೂಡ ಮಾಡಿದರು. ಎಂಟನೇ ಕ್ರಮಾಂಕದಲ್ಲಿ ಅವರು ಉಪಯುಕ್ತ ಇನಿಂಗ್ಸ್‌ಗಳನ್ನು ಆಡಿದ್ದಾರೆ.

ಭಾರತಕ್ಕೆ ಇದು ಎರಡನೇ ನೆಟ್‌ ಪ್ರಾಕ್ಟೀಸ್‌ ಆಗಿದೆ. ಶುಭಮನ್ ಗಿಲ್ ಬಿಟ್ಟು ಉಳಿದವರೆಲ್ಲಾ ಅಭ್ಯಾಸದಲ್ಲಿ ಕಾಣಿಸಿಕೊಂಡರು. ವಿರಾಟ್‌ ಕೊಹ್ಲಿ ಉತ್ತಮ ಲಯದಲ್ಲಿದ್ದಂತೆ ಕಂಡರು. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೆ.ಎಲ್‌.ರಾಹುಲ್, ರವೀಂದ್ರ ಜಡೇಜ, ಇಶಾನ್ ಕಿಶನ್ ಕೂಡ ಬ್ಯಾಟಿಂಗ್‌ನಲ್ಲಿ ಕಸುವು ತೋರಿಸಿದರು. ಬೂಮ್ರಾ, ಕುಲದೀಪ್, ಠಾಕೂರ್ ಕೂಡ ಕೆಲಹೊತ್ತು ಬ್ಯಾಟ್ ಮಾಡಿದರು.

ಕೆ.ಎಲ್‌.ರಾಹುಲ್, ಕೋಚ್‌ ರಾಹುಲ್ ದ್ರಾವಿಡ್‌ ಜೊತೆ ಸಲಹೆಗಳನ್ನು ಪಡೆಯುತ್ತಿದ್ದುದು ಕಂಡುಬಂತು. ಶಮಿ ಮತ್ತು ಸಿರಾಜ್, ಅವರು ಶ್ರೇಯಸ್ ಅವರನ್ನು ವೇಗದ ಎಸೆತಗಳಿಂದ ಪರೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.