ADVERTISEMENT

ಕೊಹ್ಲಿ, ರೋಹಿತ್ ಇದ್ದರೂ ಭಾರತದ ಬ್ಯಾಟಿಂಗ್ ದುರ್ಬಲ ಎಂದ ಪಾಕ್ ಮಾಜಿ ಆಟಗಾರ: ಏಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2023, 15:45 IST
Last Updated 30 ಆಗಸ್ಟ್ 2023, 15:45 IST
ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ (ಬಲ)
ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ (ಬಲ)   ಪಿಟಿಐ ಚಿತ್ರ

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರಂತಹ ಸ್ಟಾರ್‌ ಆಟಗಾರರು ಇರುವುದರ ಹೊರತಾಗಿಯೂ ಭಾರತ ತಂಡದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್‌ ಭಟ್‌ ಅಭಿಪ್ರಾಯ ಪಟ್ಟಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಭಟ್‌, 'ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ ಯುವ ಆಟಗಾರರು ಇದ್ದಾರೆ. ಅವರು ಸಾಕಷ್ಟು ಪಂದ್ಯಗಳನ್ನು ಆಡಿದ್ದರೂ ಹೆಚ್ಚಿನ ಅನುಭವ ಹೊಂದಿಲ್ಲ' ಎಂದು ಹೇಳಿದ್ದಾರೆ.

'ರೋಹಿತ್‌ ಶರ್ಮಾ ಚೆನ್ನಾಗಿ ಆಡಿದಾಗ ಅಥವಾ ವಿರಾಟ್‌ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದಾಗ ಮಾತ್ರವೇ ಭಾರತ ಪಂದ್ಯಗಳನ್ನು ಗೆದ್ದಿದೆ. ಹೊಣೆಗಾರಿಕೆ ಇದ್ದಾಗ ಇತರರು ವೈಫಲ್ಯ ಅನುಭವಿಸಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಬಾಬರ್‌ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟೀಂ ಇಂಡಿಯಾಗಿಂತ ಚೂರು ಮುಂದಿದೆ ಎಂದು ಭಟ್‌ ವಿಶ್ಲೇಷಿಸಿದ್ದಾರೆ. ಪಾಕ್‌ ತಂಡದಲ್ಲಿ 145 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಬೌಲಿಂಗ್‌ ಮಾಡುವ ವೇಗಿಗಳಿದ್ದಾರೆ. ಆಲ್‌ರೌಂಡರ್‌ಗಳೂ 140 ಕಿ.ಮೀ. ಆಸುಪಾಸಿನಲ್ಲಿ ಬೌಲಿಂಗ್ ಮಾಡಬಲ್ಲರು ಎಂದಿದ್ದಾರೆ.

'ಪಾಕಿಸ್ತಾನ ಬಾಬರ್‌ ಅಜಂ, ಮೊಹಮ್ಮದ್‌ ರಿಜ್ವಾನ್‌, ಫಖರ್ ಜಮಾನ್‌, ಶಾದಬ್‌ ಖಾನ್‌, ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌ ಅವರನ್ನು ಒಳಗೊಂಡಿದೆ. ನನ್ನ ಪ್ರಕಾರ ಪಾಕಿಸ್ತಾನ ಬಲಿಷ್ಠ ಪಡೆಯನ್ನು ಹೊಂದಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದಲ್ಲೂ ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರಂತಹ ಮ್ಯಾಚ್‌ ವಿನ್ನರ್‌ಗಳಿದ್ದಾರೆ. ಆದರೆ, ಬ್ಯಾಟಿಂಗ್‌ ವಿಭಾಗ ದುರ್ಬಲವಾಗಿದೆ. ಪಾಕ್‌ ತಂಡದಲ್ಲಿ ಎರಡು ಪ್ರಮುಖ ವಿಕೆಟ್‌ ಪತನವಾದರೆ, ಉಳಿದವರು ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.