ದುಬೈ: ರಾಜಕೀಯ ಸ್ವರೂಪದ್ದೆನಿಸುವ ಯಾವುದೇ ಹೇಳಿಕೆ ನೀಡಬಾರದು ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್ಸನ್ ಅವರು ಸೂಚಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಲ್ಲಿಸಿದ ದೂರಿನ ವಿಚಾರಣೆ ನಡೆದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಸೂಚನೆ ನೀಡಿದೆ.
ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಹಸ್ತಲಾಘವಕ್ಕೆ ನಿರಾಕರಿಸಿದ ಸೂರ್ಯ, ಸೆ. 14ರ ಪಂದ್ಯದ ಗೆಲುವನ್ನು ಅಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ತೊಡಗಿದ ಸೇನಾಪಡೆಗೆ ಅರ್ಪಿಸಿದ್ದರು. ಪಹಲ್ಗಾಮ್ ಹತ್ಯಾಕಾಂಡದ ಸಂತ್ರಸ್ತರ ಜೊತೆ ತಂಡ ನಿಲ್ಲುವುದಾಗಿಯೂ ಹೇಳಿಕೆ ನೀಡಿದ್ದರು. ಈ ಹಿನ್ನೆಯಲ್ಲಿ ಪಾಕಿಸ್ತಾನ ಐಸಿಸಿಗೆ ದೂರು ನೀಡಿತ್ತು. ಸೂರ್ಯ ಜೊತೆ ಬಿಸಿಸಿಐ ಸಿಒಒ ಮತ್ತು ಕ್ರಿಕೆಟ್ ಆಪರೇಷನ್ಸ್ ಮ್ಯಾನೇಜರ್ ಸಹ ವಿಚಾರಣೆ ವೇಳೆ ಹಾಜರಿದ್ದರು.
ರವೂಫ್, ಫರ್ಹಾನ್ ವಿರುದ್ಧ ದೂರು
ದುಬೈ: ಭಾನುವಾರ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪ್ರಚೋದನಾತ್ಮಕವಾಗಿ ವರ್ತಿಸಿದ ಪಾಕಿಸ್ತಾನ ತಂಡದ ಆಟಗಾರರಾದ ಹ್ಯಾರಿಸ್ ರವೂಫ್ ಮತ್ತು ಸಾಹಿಬ್‌ಝಾದಾ ಫರ್ಹಾನ್ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ದೂರು ಸಲ್ಲಿಸಿದೆ.
ಬಿಸಿಸಿಐ ಬುಧವಾರ ಇ ಮೇಲ್ ಮುಖಾಂತರ ದೂರು ಸಲ್ಲಿಸಿರುವುದಾಗಿ ಗೊತ್ತಾಗಿದೆ. ಫರ್ಹಾನ್ ಮತ್ತು ರವೂಫ್ ಅವರು ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದರೆ, ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.