ದುಬೈ: ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾಗೆ ಕಠಿಣ ಸವಾಲು ಒಡ್ಡಿತು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಅವರ ಅಮೋಘ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಕೊನೆ ಓವರ್‌ನಲ್ಲಿ ಗೆಲುವು ಸಾಧಿಸಿದೆ.
ಭಾರತದ ಟಾಪ್ ಆರ್ಡರ್ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ ಹಾಗೂ ಶುಭಮಾನ್ ಗಿಲ್ ಬೇಗನೆ ವಿಕೆಟ್ ಒಪ್ಪಿಸಿ ಹೊರ ನಡೆದಾಗ ಪಾಕಿಸ್ತಾನ ಗೆಲುವು ಸಾಧಿಸಬಹುದು ಎಂದು ಊಹಿಸಿತ್ತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಪಾಕ್ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದರು.
ಗೆಲುವಿಗೆ ಕಾರಣವಾಗಿದ್ದು ಆ ಒಂದು ಓವರ್
147 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 14 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 83 ರನ್ ಗಳಿಸಿತ್ತು. ಭಾರತದ ಗೆಲುವಿಗೆ 36 ಎಸೆತಗಳಲ್ಲಿ 64 ರನ್‌ಗಳ ಅಗತ್ಯವಿತ್ತು. ಈ ವೇಳೆ ಪಾಕಿಸ್ತಾನದ ಸ್ಪಿನ್ನರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.
15ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ರೌಫ್ ಅವರ ಮೇಲೆ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಸವಾರಿ ಮಾಡಿದರು. ಈ ಓವರ್‌ನಲ್ಲಿ ಇಬ್ಬರೂ ಸೇರಿ 17 ರನ್ ಕಲೆಹಾಕಿದರು. ಇದು ಭಾರತದ ಗೆಲುವಿನ ಪ್ರಮುಖ ಟರ್ನಿಂಗ್ ಪಾಯಿಂಟ್ ಆಯಿತು.
ರೌಫ್ 15ನೇ ಓವರ್ ಹೇಗಿತ್ತು?
ರೌಫ್ ಎಸೆದ ಮೊದಲ ಎಸೆತವನ್ನು ಶಿವಂ ದುಬೆ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡು ತಿಲಕ್ ವರ್ಮಾಗೆ ಸ್ಟ್ರೈಕ್ ನೀಡಿದರು. 3ನೇ ಎಸೆತದಲ್ಲಿ ತಿಲಕ್ ವರ್ಮಾ ಬೌಂಡರಿ ಬಾರಿಸಿದರು.
4ನೇ ಎಸೆತದಲ್ಲಿ ಅವರು ಒಂದು ರನ್ ತೆಗೆದುಕೊಂಡು ದುಬೆಗೆ ಸ್ಟ್ರೈಕ್ ನೀಡಿದರು. 5ನೇ ಎಸೆತದಲ್ಲೂ ದುಬೆ ಒಂದು ರನ್ ತೆಗೆದುಕೊಂಡರೆ, ಕೊನೆಯ ಎಸೆತದಲ್ಲಿ ತಿಲಕ್ ವರ್ಮಾ ಸಿಕ್ಸರ್ ಸಿಡಿಸುವ ಮೂಲಕ ಒಂದೇ ಓವರ್‌ನಲ್ಲಿ 17 ರನ್ ದಾಖಲಿಸಿದರು. ಇದು ಭಾರತದ ಗೆಲುವನ್ನು ಖಚಿತಪಡಿಸಿದ ಓವರ್ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.