ADVERTISEMENT

Asia Cup 2025: ಟಾಸ್ ವೇಳೆ ಕೈ ಕುಲುಕದೆ ನಡೆದ ಸೂರ್ಯಕುಮಾರ್–ಸಲ್ಮಾನ್‌ ಆಘಾ

ಪಿಟಿಐ
Published 14 ಸೆಪ್ಟೆಂಬರ್ 2025, 16:27 IST
Last Updated 14 ಸೆಪ್ಟೆಂಬರ್ 2025, 16:27 IST
   

ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ–ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಬಂಧ ಹದಗೆಟ್ಟ ಕಾರಣ ಉಭಯ ದೇಶಗಳ ನಡುವಿನ ಪಂದ್ಯಕ್ಕೆ ಭಾರತದಾದ್ಯಂತ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಟಾಸ್‌ ವೇಳೆ ಎರಡೂ ತಂಡಗಳ ನಾಯಕರು ಸಾಂಪ್ರದಾಯಿಕ ಹಸ್ತಲಾಘವ (ಹ್ಯಾಂಡ್‌ ಶೇಕ್‌) ಮಾಡದೇ ಹಿಂತಿರುಗಿದ್ದಾರೆ.

ಭಾರತದ ನಾಯಕ ಸೂರ್ಯ ಕುಮಾರ್ ಯಾದವ್‌ ಮತ್ತು ಪಾಕ್‌ ನಾಯಕ ಸಲ್ಮಾನ್‌ ಆಘಾ ಇಬ್ಬರೂ ಹ್ಯಾಂಡ್‌ ಶೇಕ್‌ ಮಾಡಲೇ ಇಲ್ಲ, ಅಲ್ಲದೇ ಮುಖಕ್ಕೆ ಮುಖ ತಿರುಗಿಸಿಯೂ ನೋಡಲಿಲ್ಲ.

ಕಾಯಿನ್‌ ಟಾಸ್‌ ಮಾಡುವ ಮೊದಲು ಎರಡು ತಂಡಗಳ ನಾಯಕರು ಹ್ಯಾಂಡ್‌ ಶೇಕ್‌ ಮಾಡುವುದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಸಂಪ್ರದಾಯ. ಆದರೆ ಟಾಸ್‌ ಬಳಿಕ ಟಿವಿ ನಿರೂಪಕ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿ ಇಬ್ಬರೂ ಡ್ರೆಸ್ಸಿಂಗ್ ಕೊಠಡಿಯತ್ತ ಸಾಗಿದ್ದಾರೆ.

ADVERTISEMENT

ಪ್ರತಿಯೊಂದು ಟೂರ್ನಮೆಂಟ್ ತನ್ನದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿರುತ್ತದೆ. ಟಾಸ್ ಮಾಡುವಾಗ ಕೈಕುಲುಕುವುದು ಕಡ್ಡಾಯವಾಗಿರುವ ಕೆಲವು ಟೂರ್ನಮೆಂಟ್‌ಗಳಿವೆ. ಅಚ್ಚರಿಯೆಂದರೆ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದ ಟಾಸ್ ಸಮಯದಲ್ಲಿಯೂ ಯುಎಇ ನಾಯಕ ಮುಹಮ್ಮದ್ ವಸೀಮ್ ಅವರೊಂದಿಗೆ ಕೈಕುಲುಕಲಿಲ್ಲ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.