ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವಿರೋಧಿಸಿ ನವದೆಹಲಿಯ ಪಕ್ಷದ ಕಚೇರಿಯಲ್ಲಿ ಆಮ್‌ಆದ್ಮಿ ಪಕ್ಷದ ಮುಖಂಡ ಸೌರಭ್ ಭಾರದ್ವಾಜ್ ಅವರು ಪ್ರತಿಕೃತಿಯನ್ನು ದಹಿಸಿದರು
–ಪಿಟಿಐ ಚಿತ್ರ
ಮುಂಬೈ/ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಕೆಲವು ವಲಯಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಕರಿಛಾಯೆ ಈ ಪಂದ್ಯದ ಮೇಲೆ ಬಿದ್ದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಬಳಿಕ ಇತ್ತೀಚಿನ ದಿನಗಳಲ್ಲಿ ಎರಡು ದೇಶಗಳ ನಡುವಣ ಬಾಂಧವ್ಯವು ಮತ್ತಷ್ಟು ಹದಗೆಟ್ಟಿದೆ.
ಉಗ್ರರ ದಾಳಿಯ ಬಗ್ಗೆ ಸಾರ್ವಜನಿಕರ ಆಕ್ರೋಶ ಇನ್ನೂ ತಣ್ಣಾಗಾಗಿಲ್ಲ. ಭಾನುವಾರ ನಡೆಯಲಿರುವ ಪಂದ್ಯದ ಸಾವಿರಾರು ಟಿಕೆಟ್‌ಗಳು ಈಗಲೂ ಲಭ್ಯ ಇವೆ. ಶುಕ್ರವಾರ ನಡೆದ ಭಾರತದ ಅಭ್ಯಾಸ ಪಂದ್ಯಕ್ಕೆ ಕೆಲವೇ ಕೆಲವು ಅಭಿಮಾನಿಗಳಷ್ಟೇ ಹಾಜರಿದ್ದರು. ಹೀಗಾಗಿ, ಎರಡು ರಾಷ್ಟ್ರಗಳ ನಡುವಿನ ‘ಹಬ್ಬದ ಸಂಭ್ರಮ’ವೂ ಕಣ್ಮರೆಯಾಗಿದೆ.
ಭಾನುವಾರ ನಡೆಯುವ ಪಂದ್ಯದಲ್ಲಿ ಭಾಗವಹಿಸದಂತೆ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಕರೆಗಳನ್ನು ಸಹ ನೀಡಲಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಗಡಿಯಲ್ಲಿ ಯೋಧರು ಪ್ರಾಣ ಕಳೆದುಕೊಳ್ಳುತ್ತಿರುವಾಗ ನಾವು ಕ್ರಿಕೆಟ್ ಆಟವಾಡಬೇಕೆ? ಪಂದ್ಯ ಆಯೋಜಿಸುವ ಮೂಲಕ ದೇಶದ ಜನರ ಭಾವನೆಗಳಿಗೆ ಗಾಸಿ ಉಂಟು ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಮಹಾರಾಷ್ಟ್ರದ್ಯಾಂತ ಪಕ್ಷವು ‘ಸಿಂಧೂರ’ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದೆ.
‘ದುಬೈನಲ್ಲಿ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಜಗತ್ತಿನ ಮುಂದೆ ತಿಳಿಸಲು ಅವಕಾಶ ಕಲ್ಪಿಸಲಿದೆ’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, ‘ಆಪರೇಷನ್ ಸಿಂಧೂರ ನಿಲ್ಲಿಸಲಾಗಿದೆಯೇ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಗಾಯ ಇನ್ನೂ ಶಮನವಾಗಿಲ್ಲ. ಭಯೋತ್ಪಾದಕರ ದಾಳಿ ಇನ್ನೂ ಮನಸ್ಸಿನಲ್ಲಿ ಉಳಿದಿರುವಾಗ ದೇಶಭಕ್ತರು ಕ್ರಿಕೆಟ್ ಪಂದ್ಯ ವೀಕ್ಷಿಸಬಾರದು’ ಎಂದು ಮನವಿ ಮಾಡಿದರು.
‘ಕ್ರಿಕೆಟ್ ಪಂದ್ಯವು ದೇಶಭಕ್ತಿಯ ತಮಾಷೆಯಾಗಿದೆ. ಪಂದ್ಯವನ್ನು ಬಹಿಷ್ಕರಿಸಿದ್ದರೆ, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶ ರವಾನಿಸಿದಂತಾಗುತ್ತಿತ್ತು’ ಎಂದು ಹೇಳಿದ್ದಾರೆ.
‘ಇದು ಅವಿಭಜಿತ ಶಿವಸೇನಾದ ನಿಲುವು ಕೂಡ ಆಗಿತ್ತು. ರಕ್ತ ಹಾಗೂ ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ, ಕ್ರಿಕೆಟ್ ಮತ್ತು ರಕ್ತ ಒಂದಾಗಲು ಹೇಗೆ ಸಾಧ್ಯ? ದೇಶಭಕ್ತಿಯ ಹೆಸರಿನಲ್ಲಿ ನಾವು ವ್ಯಾಪಾರ ಮಾಡುತ್ತಿದ್ದೇವೆ’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
‘ಪಕ್ಷವು ರಾಜ್ಯದಾದ್ಯಂತ ಪಂದ್ಯದ ವಿರುದ್ಧ ಪ‍್ರತಿಭಟನೆ ನಡೆಸಲಿದೆ. ಪಕ್ಷದ ಮಹಿಳಾ ಕಾರ್ಯಕರ್ತರು ಸಿಂಧೂರವನ್ನು ಸಂಗ್ರಹಿಸಿ, ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಿಕೊಡಲಿದ್ದಾರೆ’ ಎಂದು ತಿಳಿಸಿದ್ದಾರೆ.
‘1979ರಲ್ಲಿ ಅಫ್ಗಾನಿಸ್ತಾನದ ಮೇಲೆ ಸೋವಿಯತ್ ಒಕ್ಕೂಟವು ಆಕ್ರಮಣ ಮಾಡಿದ್ದನ್ನು ಖಂಡಿಸಿ ಮಾಸ್ಕೊದಲ್ಲಿ ನಡೆದಿದ್ದ ಬೇಸಿಗೆ ಒಲಿಂಪಿಕ್ಸ್ ಅನ್ನು ಅಮೆರಿಕ ನೇತೃತ್ವದಲ್ಲಿ ಹಲವು ರಾಷ್ಟ್ರಗಳು ಬಹಿಷ್ಕರಿಸಿದ್ದವು. ಕ್ರೀಡಾಕೂಟದಲ್ಲಿ 65 ದೇಶಗಳು ಭಾಗವಹಿಸಲು ನಿರಾಕರಿಸಿದರೆ, 80 ದೇಶಗಳು ಆಟದಲ್ಲಿ ಭಾಗವಹಿಸಲು ಅಥ್ಲೀಟ್‌ಗಳನ್ನು ಕಳುಹಿಸಿದ್ದವು’ ಎಂದು ಉದ್ಧವ್ ಠಾಕ್ರೆ ನೆನಪಿಸಿಕೊಂಡರು.
ಪಂದ್ಯ ವಿರೋಧಿಸಲು ಉದ್ಧವ್ ಠಾಕ್ರೆ ಅವರಿಗೆ ನೈತಿಕತೆ ಇಲ್ಲ. ಸಂಬಂಧ ಹದಗೆಟ್ಟಿದ್ದ ಕಾಂಗ್ರೆಸ್ ಕಾಲಘಟ್ಟದಲ್ಲಿಯೂ ಭಾರತ– ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಗಳು ನಡೆದಿದ್ದವುನರೇಶ್ ಗಣಪತ್ ಮಹಸ್ಕೆ ಸಂಸದ–ಏಕನಾಥ ಶಿಂದೆ ಶಿವಸೇನಾ ವಕ್ತಾರ
ಪಾಕಿಸ್ತಾನ ಜತೆಗಿನ ಭಾರತದ ಕ್ರಿಕೆಟ್ ಪಂದ್ಯವಾಡುವುದನ್ನು ವಿರೋಧಿಸಿ ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಪಂದ್ಯವಾಡುವ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರನ್ನು ಸರ್ಕಾರ ಅವಮಾನಿಸುತ್ತಿದೆ’ ಎಂದು ಆಮ್‌ಆದ್ಮಿ ಪಕ್ಷ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಟೀಕಿಸಿದ್ದಾರೆ. ‘ಪಂದ್ಯ ಪ್ರಸಾರ ಮಾಡುವ ಕ್ಲಬ್ ರೆಸ್ಟೊರೆಂಟ್‌ಗಳನ್ನು ಕಾರ್ಯಕರ್ತರು ಬಹಿಷ್ಕರಿಸಲಿದ್ದಾರೆ. ಇಂತಹ ಕೇಂದ್ರಗಳಿಗೆ ತೆರಳುವುದನ್ನೇ ನಿಲ್ಲಿಸಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ. ‘ಪಾಕಿಸ್ತಾನದ ಜೊತೆಗೆ ಪಂದ್ಯ ಆಯೋಜಿಸುವ ಅಗತ್ಯವಾದರೂ ಏನಿತ್ತು? ಇಡೀ ದೇಶವೇ ಪಂದ್ಯ ನಡೆಯಬಾರದು ಎಂದು ಬಯಸುತ್ತಿದೆ. ಹೀಗಿದ್ದರೂ ಯಾವ ಕಾರಣಕ್ಕಾಗಿ ಪಂದ್ಯ ಆಯೋಜಿಸಲಾಗಿದೆ’ ಎಂದು ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ. ‘ಇದು ಕೂಡ ಟ್ರಂಪ್ ಒತ್ತಡದಿಂದಲೇ ನಡೆಸಲಾಗುತ್ತಿದೆಯೇ? ಅವರಿಗಾಗಿ ಎಷ್ಟು ಮಂಡಿಯೂರುತ್ತೀರಿ’ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.