ADVERTISEMENT

Asia Cup: ಬಾಂಗ್ಲಾ ಮಣಿಸಿದ ಭಾರತ ಫೈನಲ್‌ಗೆ; ಲಂಕಾ ನಿರ್ಗಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2025, 18:05 IST
Last Updated 24 ಸೆಪ್ಟೆಂಬರ್ 2025, 18:05 IST
   

ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ಇಂದು (ಬುಧವಾರ) ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 41 ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಅಭಿಷೇಕ್ ಶರ್ಮಾ ಅರ್ಧಶತಕದ (75) ಬಲದಿಂದ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಸೈಫ್ ಹಸನ್ ಅರ್ಧಶತದ (69) ಹೋರಾಟದ ಹೊರತಾಗಿಯೂ 19.3 ಓವರ್‌ಗಳಲ್ಲಿ 127 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಸೈಫ್ ಹಸನ್ 51 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 69 ರನ್ ಗಳಿಸಿದರು. ಆದರೆ ಇತರೆ ಬ್ಯಾಟರ್‌ಗಳಿಂದ ಯಾವುದೇ ಬೆಂಬಲ ದೊರಕಲಿಲ್ಲ.

ಭಾರತ ಪರ ಕುಲದೀಪ್ ಯಾದವ್ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಗಳಿಸಿದರು.

ಸೂಪರ್ ಫೋರ್ ಹಂತದಲ್ಲಿ ಸತತ ಎರಡನೇ ಗೆಲುವು ದಾಖಲಿಸಿರುವ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಕೂಟದಿಂದಲೇ ನಿರ್ಗಮಿಸಿದೆ.

ಇದರೊಂದಿಗೆ ಗುರುವಾರ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ವಿಜೇತ ತಂಡವು ಫೈನಲ್‌ಗೆ ಪ್ರವೇಶಿಸಲಿದೆ. ಈ ಪಂದ್ಯವು ಸೆಮಿಫೈನಲ್ ಮಹತ್ವವನ್ನು ಪಡೆದಿದೆ.

ಈ ಮೊದಲು ಭಾರತಕ್ಕೆ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು 6.2 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ಕಟ್ಟಿದರು.

ಗಿಲ್ 29 ರನ್ ಗಳಿಸಿ ಔಟ್ ಆದರು. ಈ ನುಡವೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ಶಿವಂ ದುವೆ 2, ತಿಲಕ್ ವರ್ಮಾ 5 ಹಾಗೂ ನಾಯಕ ಸೂರ್ಯಕುಮಾರ್ ಯಾದವ್ 5 ರನ್ ಗಳಿಸಿ ಔಟ್ ಆದರು.

ಅತ್ತ ಬಿರುಸಿನ ಆಟವಾಡಿದ ಅಭಿಷೇಕ್ ಮಗದೊಂದು ಅರ್ಧಶತಕದ ಸಾಧನೆ ಮಾಡಿದರು. ಆದರೆ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಅಭಿಷೇಕ್ 37 ಎಸೆತಗಳಲ್ಲಿ 75 ರನ್ (6 ಬೌಂಡರಿ, 5 ಸಿಕ್ಸರ್) ಗಳಿಸಿದರು.

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 38 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಗಳಿಸಿ ಔಟಾಗದೆ ಉಳಿದರು.

ಬಾಂಗ್ಲಾದೇಶದ ಪರ ರಿಷಾದ್ ಹೊಸೈನ್ ಎರಡು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.