ಶುಭಮನ್ ಗಿಲ್
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟರ್ ಮತ್ತು ನಾಯಕನಾಗಿ ಯಶಸ್ಸು ಕಂಡಿರುವ ಶುಭಮನ್ ಗಿಲ್ ಅವರು ಮುಂಬರುವ ಏಷ್ಯಾ ಕಪ್ ಟೂರ್ನಿಗೆ ಉಪನಾಯಕರಾಗುವ ಸಾಧ್ಯತೆಯಿದೆ. ಅವರಿಗೆ ಆ ಸ್ಥಾನಕ್ಕೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಂದ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ.
ಸೆ.9ರಂದು ಯುಎಇನಲ್ಲಿ ಟೂರ್ನಿ ಆರಂಭವಾಗಲಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಟೂರ್ನಿಯಲ್ಲಿ ಆಡಲಿದ್ದು, ಅಕ್ಟೋಬರ್ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಈಗಾಗಲೇ ಬೆಂಗಳೂರಿನಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ್ದಾರೆ. ಸೆಂಟರ್ ಆಫ್ ಎಕ್ಸಲೆನ್ಸ್ ಸ್ಪೋರ್ಟ್ಸ್ ಸೈನ್ಸ್ ತಂಡ ನೀಡಲಿರುವ ಆಟಗಾರರ ಫಿಟ್‌ನೆಸ್ ಪ್ರಮಾಣಪತ್ರದ ಆಧಾರದ ಮೇಲೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇದೇ 19 ಅಥವಾ 20 ರಂದು ಏಷ್ಯಾ ಕಪ್‌ಗೆ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.
ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ಸೂರ್ಯಕುಮಾರ್ ಅವರನ್ನು ಮೊದಲ ಬಾರಿಗೆ ಟಿ20 ತಂಡದ ಪೂರ್ಣಾವಧಿ ನಾಯಕರನ್ನಾಗಿ ನೇಮಿಸಿದಾಗ ಗಿಲ್ ಉಪನಾಯಕರಾಗಿದ್ದರು. ಆದರೆ, ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಕ್ಷರ್ ಹಂಗಾಮಿ ಉಪ ನಾಯಕರಾಗಿದ್ದರು.
ಸಂಜು ಸ್ಯಾಮ್ಸನ್ ಮೊದಲ ಕೀಪರ್ ಆಗುವುದು ಬಹುತೇಕ ಖಚಿತವಾದರೂ, ಎರಡನೇ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಅಥವಾ ಧ್ರುವ ಜುರೇಲ್ ಆಯ್ಕೆಯಾಗುವ ಸಾಧ್ಯತೆಯಿದೆ.
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಹರ್ಷಿತ್ ರಾಣಾ/ಪ್ರಸಿದ್ಧ ಕೃಷ್ಣ, ಜಿತೇಶ್ ಶರ್ಮಾ/ಧ್ರುವ ಜುರೇಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.