ADVERTISEMENT

Asian Games Cricket | ಬಾಂಗ್ಲಾ ಮಣಿಸಿ ಫೈನಲ್ ತಲುಪಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2023, 3:47 IST
Last Updated 6 ಅಕ್ಟೋಬರ್ 2023, 3:47 IST
<div class="paragraphs"><p>ಭಾರತ ತಂಡದ ಆಟಗಾರರು</p></div>

ಭಾರತ ತಂಡದ ಆಟಗಾರರು

   

 ಚಿತ್ರಕೃಪೆ: ಟ್ವಿಟರ್‌ / @sportwalkmedia

ಹಾಂಗ್‌ಝೌ: ಭಾರತ ಕ್ರಿಕೆಟ್‌ ತಂಡವು ಏಷ್ಯನ್ ಕ್ರೀಡಾಕೂಟದ ಟಿ20 ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 9 ವಿಕೆಟ್‌ ಅಂತರದ ಗೆಲುವು ಸಾಧಿಸಿ, ಫೈನಲ್‌ಗೆ ಲಗ್ಗೆ ಇಟ್ಟಿದೆ.

ADVERTISEMENT

ಹಾಂಗ್‌ಝೌನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಋತುರಾಜ್ ಗಾಯಕವಾಡ ಬೌಲಿಂಗ್‌ ಆಯ್ದುಕೊಂಡರು. ಟೀಂ ಇಂಡಿಯಾ ಬೌಲರ್‌ಗಳು ನಾಯಕನ ನಿರ್ಧಾರ ಸಮರ್ಥಿಸುವಂತೆ ಬೌಲಿಂಗ್‌ ಮಾಡಿದರು. ಹೀಗಾಗಿ , ಬಾಂಗ್ಲಾ ಪಡೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 96 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬಾಂಗ್ಲಾ ಪಡೆಯ ಎಂಟು ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು. ಸಾಯಿ ಕಿಶೋರ್‌ ಮೂರು ವಿಕೆಟ್‌ ಪಡೆದರೆ, ವಾಷಿಂಗ್ಟನ್‌ ಸುಂದರ್‌ ಎರಡು ವಿಕೆಟ್‌ ಉರುಳಿಸಿದರು. ತಿಲಕ್‌ ವರ್ಮಾ, ರವಿ ಬಿಷ್ಣೋಯಿ ಮತ್ತು ಶಹಬಾಜ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಋತುರಾಜ್–ತಿಲಕ್‌ ವರ್ಮಾ ಬ್ಯಾಟಿಂಗ್
ಬಾಂಗ್ಲಾ ನೀಡಿದ ಸಾಧಾರಣ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಕ್ವಾರ್ಟರ್‌ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮೊದಲೇ ಔಟಾದರು. ಹೀಗಾಗಿ, ಭಾರತದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಈ ಹಂತದಲ್ಲಿ ಜೊತೆಯಾದ ನಾಯಕ ಋತುರಾಜ್–ವರ್ಮಾ ಚೆಂದದ ಇನಿಂಗ್ಸ್‌ ಕಟ್ಟಿದರು.

ಬೌಲರ್‌ಗಳೆದುರು ನಿರಾಯಾಸವಾಗಿ ಬ್ಯಾಟ್‌ ಬೀಸಿದ ಈ ಜೋಡಿ ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 97 ರನ್ ಕಲೆಹಾಕಿತು.

26 ಎಸೆತಗಳನ್ನು ಎದುರಿಸಿದ ಋತುರಾಜ್, 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 40 ರನ್ ಗಳಿಸಿದರು. ವರ್ಮಾ 26 ಎಸೆತಗಳಲ್ಲಿ 55 ರನ್ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು.

ಹೀಗಾಗಿ ಭಾರತ ತಂಡ ಇನ್ನೂ 10.4 ಓವರ್‌ ಬಾಕಿ ಇರುವಂತೆಯೇ ಜಯ ಕಂಡಿತು.

ಫೈನಲ್‌ಗೆ ಯಾರು?
ಇದೇ ಕ್ರೀಡಾಂಗಣದಲ್ಲಿ ಇಂದು ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆದ್ದ ತಂಡ ನಾಳೆ ನಡೆಯುವ ಫೈನಲ್‌ನಲ್ಲಿ ಭಾರತಕ್ಕೆ ಸವಾಲೊಡ್ಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.