ಮಹಿಳಾ ಏಕದಿನ ವಿಶ್ವಕಪ್
ಗುವಾಹಟಿ: ತವರಿನಲ್ಲಿ ಆಡುತ್ತಿರುವುದು ಮತ್ತು ಉತ್ತಮ ಲಯದಲ್ಲಿರುವುದರಿಂದ ಭಾರತ ತಂಡ, ಇದೇ ಮೊದಲ ಬಾರಿ ಮಹಿಳೆಯರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆತಿಥೇಯರು ಮಂಗಳವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಿ ಅಭಿಯಾನ ಆರಂಭಿಸಲಿದ್ದಾರೆ.
ಇಲ್ಲಿ ಪ್ರಶಸ್ತಿ ಗೆದ್ದರೆ, ತಂಡಕ್ಕೆ ಅದು ಚೊಚ್ಚಲ ಐಸಿಸಿ ಪ್ರಶಸ್ತಿಯೂ ಆಗಲಿದೆ. 47 ವರ್ಷಗಳ ಕಾಯುವಿಕೆಗೆ ತೆರೆಬೀಳಲಿದೆ. ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಹರ್ಮನ್‌ಪ್ರೀತ್ ಸಾರಥ್ಯದ ತಂಡವು, ತವರಿನಲ್ಲಿ ಆಡುವ ಲಾಭವನ್ನು ಗರಿಷ್ಠ ಮಟ್ಟಿಗೆ ಪಡೆಯಲು ಯತ್ನಿಸಲಿದೆ. 12 ವರ್ಷಗಳ ನಂತರ ಪ್ರತಿಷ್ಠಿತ ಟೂರ್ನಿಯು ಭಾರತದಲ್ಲಿ ನಡೆಯುತ್ತಿದೆ.
ಎಂಟು ತಂಡಗಳು– ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ– ಕಣದಲ್ಲಿವೆ. ರೌಂಡ್‌ರಾಬಿನ್ ಮಾದರಿಯಲ್ಲಿ 28 ಲೀಗ್ ಪಂದ್ಯಗಳು ನಡೆಯಲಿವೆ. ಭಾರತದ ನಾಲ್ಕು ಕಡೆ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯು ದಾಖಲೆಯ ₹123 ಕೋಟಿ ಬಹುಮಾನ ಹೊಂದಿದೆ. 2022ರ ಟೂರ್ನಿಗೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕ.
ಕೊಲಂಬೊದಲ್ಲಿ 11 ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ತಂಡ ತನ್ನೆಲ್ಲಾ ಪಂದ್ಯಗಳನ್ನು ಇಲ್ಲಿ ಆಡಲಿದೆ. ಅಕ್ಟೋಬರ್ 5ರಂದು ಭಾರತ – ಪಾಕಿಸ್ತಾನ ಪಂದ್ಯವೂ ಇಲ್ಲಿ ನಿಗದಿಯಾಗಿದೆ. ಪಾಕಿಸ್ತಾನ ಒಂದೊಮ್ಮೆ ಸೆಮಿಫೈನಲ್, ಫೈನಲ್ ತಲುಪಿದರೆ ಆ ಪಂದ್ಯಗಳಿಗೂ ಕೊಲಂಬೊ ಆತಿಥ್ಯ ವಹಿಸಲಿದೆ.
ತಂಡಕ್ಕೆ ವಿಶ್ವಾಸ: ಭಾರತ ತಂಡ, ಇತ್ತೀಚೆಗೆ ಇಂಗ್ಲೆಂಡ್ ತಂಡವನ್ನು ಏಕದಿನ ಮತ್ತು ಟಿ20 ಮಾದರಿಯ ಸರಣಿಗಳಲ್ಲಿ ಸೋಲಿಸಿ ವಿಶ್ವಾಸದಲ್ಲಿದೆ. ಟೂರ್ನಿಗೆ ತಾಲೀಮು ಆಗಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಸೋತರೂ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಆಸ್ಟ್ರೇಲಿಯಾ ದಾಖಲೆಯ ಎಂಟನೇ ಪ್ರಶಸ್ತಿ ಗೆಲ್ಲುವ ಗುರಿಯಲ್ಲಿದೆ.
ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರು ಬ್ಯಾಟಿಂಗ್ ವಿಭಾಗದ ಆಧಾರಸ್ಥಂಭ. ಆಸ್ಟ್ರೇಲಿಯಾ ವಿರುದ್ಧ ಈ ವರ್ಷ ಸತತ ಎರಡು ಸೇರಿದಂತೆ ಏಕದಿನ ಪಂದ್ಯಗಳಲ್ಲಿ ನಾಲ್ಕು ಶತಕ ಬಾರಿಸಿದ್ದಾರೆ. ಉಪನಾಯಕಿಯಾಗಿರುವ ಈ ಎಡಗೈ ಆಟಗಾರ್ತಿಗೆ, ಪ್ರತಿಕಾ ರಾವಲ್ ಉತ್ತಮ ಜೊತೆ ಎನಿಸಿದ್ದಾರೆ.
ನಾಯಕಿ ಹರ್ಮನ್‌ಪ್ರೀತ್ ಅವರಿಗೆ ಇದು ಐದನೇ ವಿಶ್ವಕಪ್. ಅವರ ಅನುಭವದ ಜೊತೆಗೆ ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ ಅವರಿಂದಾಗಿ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ.
ಆದರೆ ಸವಾಲು ಇರುವುದು ತಂಡದ ಮನೋಬಲದಲ್ಲಿ. ನಿರ್ಣಾಯಕ ಗಳಿಗೆಯಲ್ಲಿ ತಂಡ ಒತ್ತಡಕ್ಕೆ ಒಳಗಾಗಿರುವ ಇತಿಹಾಸವಿದೆ.
ಶ್ರೀಲಂಕಾ ತಂಡವನ್ನು ಚಾಮರಿ ಅಟಪಟ್ಟು ಮುನ್ನಡೆಸುತ್ತಿದ್ದಾರೆ. ಭರವಸೆ ಮೂಡಿಸಿರುವ 20 ವರ್ಷ ವಯಸ್ಸಿನ ಆಲ್‌ರೌಂಡರ್ ದೆವ್ಮಿ ವಿಹಂಗ ಅವರ ನಿರ್ವಹಣೆಯ ಮೇಲೆ ಗಮನವಿದೆ. ಇತ್ತೀಚೆಗೆ ತ್ರಿಕೋನ ಸರಣಿಯಲ್ಲಿ ಅವರು 11 ವಿಕೆಟ್ ಪಡೆದಿದ್ದರು.
ಹೆಚ್ಚಿನ ಲೀಗ್ ಪಂದ್ಯಗಳನ್ನು ತವರಿನಲ್ಲಿ ಆಡುತ್ತಿರುವುದು ಲಂಕಾ ಸವಾಲಿಗೆ ಬಲ ತುಂಬಿದೆ.
ಇತರ ಆಕಾಂಕ್ಷಿಗಳು:
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಈ ಬಾರಿಯೂ ಪ್ರಶಸ್ತಿಗೆ ನೆಚ್ಚಿನ ತಂಡವಾಗಿದೆ. 2022ರ ಟೂರ್ನಿಯಲ್ಲಿ ಈ ತಂಡ ಪ್ರಾಬಲ್ಯ ಮೆರೆದಿತ್ತು. ಫೈನಲ್‌ನಲ್ಲಿ ಅಲಿಸಾ ಹೀಲಿ ಅವರು ದಾಖಲೆಯ 170 ರನ್ ಬಾರಿಸಿ ತಂಡ ಗೆಲ್ಲಲು ನೆರವಾಗಿದ್ದರು.
ಈಗ ಅಲಿಸಾ ನೇತೃತ್ವದ ಪ್ರಬಲ ಆಸ್ಟ್ರೇಲಿಯಾ ದಾಖಲೆಯ ಹಿನ್ನೆಲೆ, ಸ್ಫೂರ್ತಿಯೊಡನೆ ಸವಾಲಿಗೆ ಸಜ್ಜಾಗಿದೆ.
ಎರಡನೇ ಕ್ರಮಾಂಕದ ಇಂಗ್ಲೆಂಡ್ ತಂಡ, ಎಂಟು ವರ್ಷಗಳ ಹಿಂದೆ ಗೆದ್ದ ಟ್ರೋಫಿಯನ್ನು ಮರಳಿ ಪಡೆಯಲು ತವಕದಲ್ಲಿದೆ.
ತಂಡಗಳು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಪ್ರತಿಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಉಮಾ ಚೆಟ್ರಿ, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮನ್‌ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ.
ಶ್ರೀಲಂಕಾ: ಚಾಮರಿ ಅಟಪಟ್ಟು (ನಾಯಕಿ), ಹಸಿನಿ ಪೆರೇರಾ, ವಿಷ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನಿಲಾಕ್ಷಿ ಡಿಸಿಲ್ವಿ, ಅನುಷ್ಕಾ ಸಂಜೀವನಿ, ಇಮೇಶಾ ದುಲಾನಿ, ದೇವ್ಮಿ ವಿಹಂಗ, ಪಿಯುಮಿ ವತ್ಸಲ, ಇನೊಕಾ ರಣವೀರ, ಸುಗಂಧಿಕಾ ಕುಮಾರಿ, ಉದೇಶೀಕ ಪ್ರಬೋದನಿ, ಮಲ್ಕಿ ಮದರಾ, ಅಚಿನಿ ಕುಲಸೂರಿಯ.
ಪಂದ್ಯ ಆರಂಭ: ಮಧ್ಯಾಹ್ನ 3.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.