ಮೆಲ್ಬರ್ನ್ ಕ್ರೀಡಾಂಗಣ
ಕೃಪೆ: X/@MCG
ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ಹಾಗೂ ಭಾರತ ಕ್ರಿಕೆಟ್ ತಂಡಗಳು ಸೆಣಸುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿದೆ.
ಮೊದಲ ದಿನದಾಟವನ್ನು ಬರೋಬ್ಬರಿ 87,242 ಪ್ರೇಕ್ಷಕರು ಕ್ರೀಡಾಂಗಣದಲ್ಲೇ ಕಣ್ತುಂಬಿಕೊಂಡಿದ್ದಾರೆ. ಈ ಮಾಹಿತಿಯನ್ನು 'ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್' ಎಕ್ಸ್/ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ. ಇದರೊಂದಿಗೆ, ಟೆಸ್ಟ್ ಪಂದ್ಯವನ್ನು ಯಾವುದೇ ಒಂದೇ ದಿನ ಕ್ರೀಡಾಂಗಣದಲ್ಲಿ ಅತಿಹೆಚ್ಚು ಮಂದಿ ವೀಕ್ಷಿಸಿದ ದಾಖಲೆ ನಿರ್ಮಾಣವಾಯಿತು.
'ಬಾಕ್ಸಿಂಗ್ ಡೇ' ಪಂದ್ಯದ ಮೊದಲ ದಿನದಾಟ ವೀಕ್ಷಣೆಗೆ, ಟಿಕೆಟ್‌ಗಳು ಎರಡು ವಾರದ ಹಿಂದೆಯೇ ಮಾರಾಟವಾಗಿದ್ದವು.
ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಯಾಮ್ ಕೋನ್‌ಸ್ಟಾಸ್ ಆಕರ್ಷಕ ಬ್ಯಾಟಿಂಗ್ ಸೇರಿದಂತೆ, ಹಲವು ರೋಮಾಂಚನಕಾರಿ ಕ್ಷಣಗಳಿಗೆ ಮೊದಲ ದಿನದಾಟ ಸಾಕ್ಷಿಯಾಯಿತು.
ಅಮೋಘ ಅರ್ಧಶತಕ ಗಳಿಸಿದ ಕೋನ್‌ಸ್ಟಾಸ್, ಜಸ್‌ಪ್ರಿತ್ ಬೂಮ್ರಾ ಅವರಂಥ ಶ್ರೇಷ್ಠ ವೇಗಿ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ರಿವರ್ಸ್, ಸ್ಕೂಪ್ ಹೊಡೆತಗಳನ್ನು ಪ್ರಯೋಗಿಸಿ, ಬೆನ್ನುಬೆನ್ನಿಗೆ ಬೌಂಡರಿ ಮತ್ತು ಸಿಕ್ಸರ್ ಸಿಡಿಸುವ ಮೂಲಕ ಭರಪೂರ ಮನರಂಜನೆ ನೀಡಿದರು.
ವಿರಾಟ್ ಕೊಹ್ಲಿ ಅವರು ಕೋನ್‌ಸ್ಟಾಸ್ ಭುಜಕ್ಕೆ ಡಿಕ್ಕಿಯಾದದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಕೊಹ್ಲಿ ವರ್ತನೆಯನ್ನು ಹಿರಿಯ ಕ್ರಿಕೆಟಿಗರು ಹಾಗೂ ನೆಟ್ಟಿಗರು ಟೀಕಿಸಿದ್ದಾರೆ.
ಭಾರತದ ಬೌಲರ್‌ಗಳು ದಿನದಾಟದ ಕೊನೇ ಅವಧಿಯಲ್ಲಿ ತಿರುಗೇಟು ನೀಡಿದ ಕಾರಣ, ಆತಿಥೇಯ ಪಡೆ 6 ವಿಕೆಟ್‌ಗೆ 311 ರನ್ ಗಳಿಸಿದೆ.
ಬೂಮ್ರಾ 3 ವಿಕೆಟ್ ಉರುಳಿಸಿದರೆ, ಆಕಾಶ್ ದೀಪ್, ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಒಂದೊಂದು ವಿಕೆಟ್ ಪಡೆದಿದ್ದಾರೆ.
ಸರಣಿ ಸಮಬಲ
ಸರಣಿಯ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ನಂತರದ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡು ಡ್ರಾ ಮಾಡಿಕೊಂಡಿತ್ತು. ಹೀಗಾಗಿ, ಸರಣಿ 1–1ರಲ್ಲಿ ಸಮಬಲಗೊಂಡಿದೆ.
ಈ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸುವ ಲೆಕ್ಕಚಾರದಲ್ಲಿ ಎರಡೂ ತಂಡಗಳು ಪೈಪೋಟಿ ನಡೆಸುತ್ತಿವೆ.
ಅಂತಿಮ ಪಂದ್ಯವು 2025ರ ಜನವರಿ 3ರಂದು ಸಿಡ್ನಿಯಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.