ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವನ್ ಸ್ಮಿತ್ ವಿಕೆಟ್ ಪಡೆದ ಖುಷಿಯಲ್ಲಿ ಭಾರತದ ವೇಗಿ ಪ್ರಸಿದ್ಧ ಕೃಷ್ಣ
ಸಿಡ್ನಿ: ‘ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ಪಾತ್ರ ಮೂರನೇ ಎರಡರಷ್ಟು’ ಎಂದು ಈಚೆಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಸ್ಟುವರ್ಟ್ ಕ್ಲಾರ್ಕ್ ಸಂದರ್ಶನದಲ್ಲಿ ಹೇಳಿದ್ದರು.
ಭಾನುವಾರ ಇಲ್ಲಿ ಬೂಮ್ರಾ ಗಾಯದಿಂದಾಗಿ ಆಟದಿಂದ ಹೊರಗುಳಿದಾಗ ಭಾರತ ತಂಡಕ್ಕೆ ಆದ ಕಷ್ಟವು ಸ್ಟುವರ್ಟ್ ಹೇಳಿಕೆಯನ್ನು ಪುಷ್ಟಿಕರಿಸಿದವು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 181 ರನ್‌ಗಳಿಗೆ ನಿಯಂತ್ರಿಸುವಲ್ಲಿ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಗೆಲುವು ಅತ್ಯಗತ್ಯವಾಗಿದ್ದ ಎರಡನೇ ಇನಿಂಗ್ಸ್‌ನಲ್ಲಿ ವೇಗಿಗಳ ಸಂಪೂರ್ಣ ಸಾಮರ್ಥ್ಯ ಹೊರಹೊಮ್ಮಲಿಲ್ಲ. ಪ್ರಸಿದ್ಧ (65ಕ್ಕೆ3) ಮಾತ್ರ ಒಂದಿಷ್ಟು ಪ್ರಯತ್ನ ಮಾಡಿದರು.
ಆದರೆ ಆತಿಥೇಯರು ಕೆಲವು ಕಠಿಣ ಸನ್ನಿವೇಶ ಎದುರಿಸಿದ ನಂತರವೂ ಪಂದ್ಯದಲ್ಲಿ 6 ವಿಕೆಟ್‌ಗಳ ಜಯಸಾಧಿಸಿತು. ಪ್ಯಾಟ್ ಕಮಿನ್ಸ್ ಬಳಗವು 3–1ರಿಂದ ಸರಣಿ ಜಯಿಸಿತು. ಮೂರನೇ ದಿನದಾಟದಲ್ಲಿ ಮೆಕ್‌ಗ್ರಾ ಫೌಂಡೇಷನ್ ನಡೆಸಿದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಸುಗೆಂಪು ವರ್ಣಕ್ಕೆ ತಿರುಗಿದ್ದ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವು ಟ್ರೋಫಿಗೆ ಮುತ್ತಿಕ್ಕಿತು. ಒಂಬತ್ತು ವರ್ಷಗಳ ನಂತರ ಈ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಮುಡಿಗೇರಿಸಿಕೊಂಡಿತು.
ಇದರೊಂದಿಗೆ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸುವ ಹಾದಿಯು ಸಂಪೂರ್ಣವಾಗಿ ಮುಚ್ಚಿತು. ಇದೇ ಮೊದಲ ಬಾರಿ ಅರ್ಹತೆ ಗಿಟ್ಟಿಸಿರುವ ದಕ್ಷಿಣ ಆಫ್ರಿಕಾ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತ ತಂಡವು ಎರಡು ಬಾರಿ ರನ್ನರ್ಸ್ ಅಪ್ ಆಗಿತ್ತು.
ಎರಡನೇ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 6 ವಿಕೆಟ್‌ಗಳಿಗೆ 141 ರನ್ ಗಳಿಸಿತ್ತು. ಭಾನುವಾರ ಬೆಳಿಗ್ಗೆ ಈ ಮೊತ್ತಕ್ಕೆ 16 ರನ್ ಮಾತ್ರ ಸೇರಿಸಲು ಸಾಧ್ಯವಾಯಿತು. 157 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡ ಭಾರತ, 161 ರನ್‌ಗಳ ಗುರಿಯೊಡ್ಡಿತು.
ಆತಿಥೇಯ ವೇಗಿ ಸ್ಕಾಟ್ ಬೋಲ್ಯಾಂಡ್ (45ಕ್ಕೆ6) ಮತ್ತು ಪ್ಯಾಟ್ ಕಮಿನ್ಸ್ (44ಕ್ಕೆ3) ತಲಾ ಎರಡು ವಿಕೆಟ್ ಪಡೆದರು. ಸ್ಕಾಟ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗಳಿಸಿದರು. ಪಿಚ್‌ನಲ್ಲಿ ಸ್ವಿಂಗ್ ಮತ್ತು ಬೌನ್ಸ್‌ಗೆ ಅನುಕೂಲಕವಾಗುವಂತಿದ್ದ ಪ್ಯಾಚ್‌ಗಳಲ್ಲಿ ಚೆಂಡನ್ನು ಹಾಕುವ ನಿಖರತೆಯಿಂದ ಸ್ಕಾಟ್ ಯಶಸ್ವಿಯಾದರು.
ಆದರೆ ಇದೇ ತಂತ್ರವನ್ನು ಅನುಕರಿಸುವಲ್ಲಿ ಭಾರತದ ಬೌಲರ್‌ಗಳು ಸಫಲರಾಗಲಿಲ್ಲ. ಇದರಿಂದಾಗಿ ನೀಡಿದ್ದ ಗುರಿಯನ್ನು ರಕ್ಷಿಸಿಕೊಳ್ಳುವಲ್ಲಿ ಎಡವಿದರು. ಬೂಮ್ರಾ ಅವರು ಬ್ಯಾಟಿಂಗ್ ಮಾಡಲು ಬಂದಿದ್ದರಿಂದ ಬೌಲಿಂಗ್ ಕೂಡ ಮಾಡುವ ಭರವಸೆ ಮೂಡಿಸಿದ್ದರು. ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಭಾರತ ತಂಡವು ಫೀಲ್ಡಿಂಗ್‌ಗೆ ಮೈದಾನಕ್ಕಿಳಿದಾಗ ಬೂಮ್ರಾ ಗೈರುಹಾಜರಿ ಸ್ಪಷ್ಟವಾಯಿತು.
ಇದರ ಲಾಭವನ್ನು ಆತಿಥೇಯ ತಂಡದ ಆರಂಭಿಕ ಜೋಡಿ ತೆಗೆದುಕೊಂಡಿತು. ಸ್ಯಾಮ್ ಕಾನ್‌ಸ್ಟಸ್ (22 ರನ್) ಮತ್ತು ಉಸ್ಮಾನ್ ಖ್ವಾಜಾ (41 ರನ್) ಅವರು ಮೊದಲ 3 ಓವರ್‌ಗಳಲ್ಲಿಯೇ ಸಿರಾಜ್ ಮತ್ತು ಪ್ರಸಿದ್ಧ ಅವರ ಎಸೆತಗಳನ್ನು ದೂಳೀಪಟ ಮಾಡಿದರು. ಸೂಕ್ತ ಲೈನ್ ಮತ್ತು ಲೆಂಗ್ತ್ ನಿರ್ವಹಿಸಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.
ಈ ನಡುವೆಯೇ ಕನ್ನಡಿಗ ಪ್ರಸಿದ್ಧ ಅವರು ಸ್ಯಾಮ್, ಮಾರ್ನಸ್ ಲಾಬುಷೇನ್ ಮತ್ತು ಸ್ಟೀವ್ ಸ್ಮಿತ್ ಅವರ ವಿಕೆಟ್ ಕಬಳಿಸಿದರು. ಸ್ಮಿತ್ ಅವರು ಟೆಸ್ಟ್‌ನಲ್ಲಿ 10 ಸಾವಿರ ರನ್ ಮೈಲುಗಲ್ಲು ತಲುಪಲು ಇನ್ನೊಂದು ರನ್ ಬೇಕಿದ್ದಾಗಲೇ ಪ್ರಸಿದ್ಧ ಎಸೆತದಲ್ಲಿ ಯಶಸ್ವಿಗೆ ಕ್ಯಾಚ್ ಆದರು. ಈ ಸಂದರ್ಭದಲ್ಲಿ ಭಾರತದ ಪಾಳೆಯದಲ್ಲಿ ಹೋರಾಟದ ಭಾವ ಚಿಗುರಿತು. ಸಿರಾಜ್ ಕೂಡ ಉಸ್ಮಾನ್ ವಿಕೆಟ್ ಗಳಿಸಿದರು.
ಆದರೆ ಬ್ಯು ವೆಬ್‌ಸ್ಟರ್ (ಅಜೇಯ 39) ಮತ್ತು ಟ್ರಾವಿಸ್ ಹೆಡ್ (ಅಜೇಯ 34) ಅವರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದರು. ತಂಡವು 4 ವಿಕೆಟ್‌ಗಳಿಗೆ 162 ರನ್ ಗಳಿಸಿತು. ಚಹಾ ವಿರಾಮಕ್ಕೆ ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ಆತಿಥೇಯ ಬಳಗ ಜಯಭೇರಿ ಬಾರಿಸಿತು.
ಬಾರ್ಡರ್–ಗಾವಸ್ಕರ್ ಟ್ರೋಫಿಯೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿ ಜಯಿಸಿದ ಆಸ್ಟ್ರೇಲಿಯಾ ತಂಡಕ್ಕೆ ಪ್ರಶಸ್ತಿ ನೀಡಲು ತಮ್ಮನ್ನು ಆಹ್ವಾನಿಸದ ಆಯೋಜಕರ ವಿರುದ್ಧ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡವು 3–1ರಿಂದ ಭಾರತದ ಎದುರು ಸರಣಿ ಜಯಿಸಿತು. ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಅ್ಯಲನ್ ಬಾರ್ಡರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಗಾವಸ್ಕರ್ ಅವರು ಕ್ರೀಡಾಂಗಣದಲ್ಲಿಯೇ ಹಾಜರಿದ್ದರು. ಆದರೂ ಅವರಿಗೆ ಆಹ್ವಾನ ನೀಡಿರಲಿಲ್ಲ.
‘ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದ್ದರೆ ಬಹಳ ಸಂತೋಷದಿಂದ ಅಲ್ಲಿರುತ್ತಿದ್ದೆ. ಏಕೆಂದರೆ ಇದು ಬಾರ್ಡರ್–ಗಾವಸ್ಕರ್ ಟ್ರೋಫಿ ಮತ್ತು ಆಸ್ಟ್ರೇಲಿಯಾ–ಭಾರತದ್ದು’ ಎಂದು ಕೋಡ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.
‘ಆಸ್ಟ್ರೇಲಿಯಾ ಜಯಿಸಿದ್ದು ನನಗೇನೂ ಬೇಸರವಿಲ್ಲ. ಅವರಿಗೆ ಪ್ರಶಸ್ತಿ ನೀಡಲು ಭಾಗಿಯಾಗಲು ನನಗೇನೂ ಹಿಂಜರಿಕೆ ಇರಲಿಲ್ಲ. ಅವರು ತಮ್ಮ ಎದುರಾಳಿಗಿಂತ ಉತ್ತಮ ಕ್ರಿಕೆಟ್ ಆಡಿದರು. ಅದಕ್ಕಾಗಿ ಗೆದ್ದರು. ನಾನೊಬ್ಬ ಭಾರತೀಯನಾಗಿ ನನ್ನ ಉತ್ತಮ ಸ್ನೇಹಿತ ಆ್ಯಲನ್ ಬಾರ್ಡರ್ ಜೊತೆಗೂಡಿ ಪ್ರಶಸ್ತಿ ಪ್ರದಾನ ಮಾಡಲು ಹೆಮ್ಮೆಪಡುತ್ತಿದ್ದೆ’ ಎಂದೂ ಗಾವಸ್ಕರ್ ಹೇಳಿದರು.
ಒಂದೊಮ್ಮೆ ಭಾರತ ತಂಡವು ಸಿಡ್ನಿ ಟೆಸ್ಟ್‌ನಲ್ಲಿ ಜಯಿಸಿದ್ದರೆ, ಸರಣಿ 2–2ರಿಂದ ಸಮವಾಗುತ್ತಿತ್ತು. ಆಗ ಭಾರತ ತಂಡದ ನಾಯಕ ಜಸ್‌ಪ್ರೀತ್ ಬೂಮ್ರಾ ಅವರಿಗೆ ಟ್ರೋಫಿ ನೀಡಲು ಗಾವಸ್ಕರ್ ಇರುತ್ತಿದ್ದರು. ಗಾವಸ್ಕರ್ ಅವರಿಗೆ ತಿಳಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.