ADVERTISEMENT

ಆ್ಯಷಸ್ ಟೆಸ್ಟ್ ಸರಣಿ: ಗೆಲುವಿನತ್ತ ಆಸ್ಟ್ರೇಲಿಯಾ ಹೆಜ್ಜೆ

ಲಾಬುಶೇನ್‌, ಟ್ರಾವಿಸ್ ಹೆಡ್ ಅರ್ಧಶತಕ; ಇಂಗ್ಲೆಂಡ್‌ಗೆ ಭಾರಿ ಮೊತ್ತದ ಗುರಿ

ಏಜೆನ್ಸೀಸ್
Published 19 ಡಿಸೆಂಬರ್ 2021, 13:47 IST
Last Updated 19 ಡಿಸೆಂಬರ್ 2021, 13:47 IST
ಓವರ್‌ಗಳ ನಡುವೆ ಮಾರ್ನಸ್ ಲಾಬುಶೇನ್ (ಎಡ) ಮತ್ತು ಟ್ರಾವಿಸ್ ಹೆಡ್ ‍ಪರಸ್ಪರ ಮಾತನಾಡಿಕೊಂಡರು –ಎಎಫ್‌ಪಿ ಚಿತ್ರ
ಓವರ್‌ಗಳ ನಡುವೆ ಮಾರ್ನಸ್ ಲಾಬುಶೇನ್ (ಎಡ) ಮತ್ತು ಟ್ರಾವಿಸ್ ಹೆಡ್ ‍ಪರಸ್ಪರ ಮಾತನಾಡಿಕೊಂಡರು –ಎಎಫ್‌ಪಿ ಚಿತ್ರ   

ಅಡಿಲೇಡ್‌: ಭರವಸೆ ಮೂಡಿಸಿದ್ದ ನಾಯಕ ಜೋ ರೂಟ್ ದಿನದಾಟದ ಕೊನೆಯ ಓವರ್‌ನಲ್ಲಿ ಔಟಾದರು. ಇದರೊಂದಿಗೆ ಇಂಗ್ಲೆಂಡ್‌ನ ಆತಂಕ ಹೆಚ್ಚಾಯಿತು; ಆಸ್ಟ್ರೇಲಿಯಾದ ಗೆಲುವಿನ ಹಾದಿ ಇನ್ನಷ್ಟು ಹತ್ತಿರವಾಯಿತು.

ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಆತಿಥೇಯ ಆಸ್ಟ್ರೇಲಿಯಾ 230 ರನ್‌ ಗಳಿಸಿದ ಎರಡನೇ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್‌ ಜಯಕ್ಕೆ ಕಠಿಣ ಗುರಿ ನೀಡಿತು. 468 ರನ್‌ಗಳ ಗುರಿ ಬೆನ್ನತ್ತಿರುವ ತಂಡ ನಾಲ್ಕನೇ ದಿನದ ಅಂತ್ಯಕ್ಕೆ 82 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದೆ.

ಯಾವುದೇ ತಂಡ ಈ ವರೆಗೆ 450ಕ್ಕೂ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿಲ್ಲ. 2003ರಲ್ಲಿ ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ ತಂಡ ನೀಡಿದ 418 ರನ್‌ಗಳ ಗುರಿ ಬೆನ್ನತ್ತಿ ವೆಸ್ಟ್ ಇಂಡೀಸ್ ಜಯ ಸಾಧಿಸಿದ್ದು ಈ ವರೆಗಿನ ದಾಖಲೆಯಾಗಿದೆ.

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡದ ಆರಂಭ ಚೆನ್ನಾಗಿರಲಿಲ್ಲ. 4 ರನ್ ಗಳಿಸುವಷ್ಟರಲ್ಲಿ ತಂಡ ಹಸೀಬ್ ಹಮೀದ್ ಅವರನ್ನು ಕಳೆದುಕೊಂಡಿತು. ನಂತರ ರೋರಿ ಬರ್ನ್ಸ್ ಜೊತೆಗೂಡಿದ ಡೇವಿಡ್ ಮಲಾನ್ 44 ರನ್‌ಗಳನ್ನು ಸೇರಿಸಿದರು. ಮಲಾನ್ ಔಟಾದ ನಂತರಬರ್ನ್ಸ್ ಮತ್ತು ಜೋ ರೂಟ್ ಇನಿಂಗ್ಸ್ ಮುನ್ನಡೆಸಿದರು. 12 ರನ್ ಅಂತರದಲ್ಲಿ ಇವರಿಬ್ಬರ ವಿಕೆಟ್ ಕಳೆದುಕೊಂಡ ತಂಡ ಸೋಲಿನತ್ತ ಸಾಗಿದೆ. 40 ಎಸೆತಗಳಲ್ಲಿ ಮೂರು ರನ್ ಗಳಿಸಿರುವ ಬೆನ್ ಸ್ಟೋಕ್ಸ್ ಭರವಸೆಯಾಗಿ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಜಯಕ್ಕೆ ಕೊನೆಯ ದಿನವಾದ ಸೋಮವಾರ ಪ್ರವಾಸಿ ತಂಡ 386 ರನ್ ಗಳಿಸಬೇಕಾಗಿದೆ.

ಲಾಬುಶೇನ್, ಹೆಡ್ ಅರ್ಧಶತಕ

ಶನಿವಾರ ಒಂದು ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದ್ದ ಆಸ್ಟ್ರೇಲಿಯಾ ನಾಲ್ಕನೇ ದಿನದ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. 7 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದ ತಂಡ ಮಾರ್ನಸ್ ಲಾಬುಶೇನ್ ಮತ್ತು ಟ್ರಾವಿಸ್ ಹೆಡ್ ಅವರ ಅಮೋಘ ಆಟದ ನೆರವಿನಿಂದ ಚೇತರಿಸಿಕೊಂಡಿತು.

ಮಾರ್ಕಸ್ ಹ್ಯಾರಿಸ್ ಜೊತೆ ದಿನದಾಟ ಆರಂಭಿಸಿದ ನೈಟ್ ವಾಚ್‌ಮನ್ ಮೈಕೆಲ್ ನೆಸರ್ ಮೊದಲ ಎಸೆತದಲ್ಲೇ ರನೌಟ್‌ನಿಂದ ಬಚಾವಾದರು. ಆದರೆ ಆ್ಯಂಡರ್ಸನ್ ಎಸೆತದಲ್ಲಿ ಬೌಲ್ಡ್ ಆದರು. ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರ ಅಮೋಘ ಕ್ಯಾಚ್‌ಗೆ ಹ್ಯಾರಿಸ್ ವಿಕೆಟ್ ಕಳೆದುಕೊಂಡರು. ಸ್ಮಿತ್ ನೀಡಿದ ಮೊದಲ ಕ್ಯಾಚ್ ಕೈಚೆಲ್ಲಿದ ಬಟ್ಲರ್ ಮತ್ತೊಂದು ಅವಕಾಶದಲ್ಲಿ ಯಶಸ್ವಿಯಾದರು.

ನಂತರ ಲಾಬುಶೇನ್ ಮತ್ತು ಹೆಡ್ ಆಟದ ಸೊಬಗು ಪ್ರೇಕ್ಷಕರನ್ನು ರಂಜಿಸಿತು. ಜೇ ರಿಚರ್ಡ್ಸನ್ ವಿಕೆಟ್ ಪತನವಾದ ಕೂಡಲೇ ಇನಿಂಗ್ಸ್ ಡಿಕ್ಲೇರ್ ಮಾಡಲಾಯಿತು. ಕ್ಯಾಮರಾನ್ ಗ್ರೀನ್ 33 ರನ್ ಗಳಿಸಿ ಔಟಾಗದೆ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.