ADVERTISEMENT

ತಿರುಗೇಟು ನೀಡಿದ ಇಂಗ್ಲೆಂಡ್‌: ಆಸ್ಟ್ರೇಲಿಯಾ ವಿರುದ್ಧ ಗೆಲುವು

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 7:48 IST
Last Updated 14 ಸೆಪ್ಟೆಂಬರ್ 2020, 7:48 IST
ಮೂರು ವಿಕೆಟ್ ಕಬಳಿಸಿ ಇಂಗ್ಲೆಂಡ್‌ನ ಜೊಫ್ರಾ ಆರ್ಚರ್ –ರಾಯಿಟರ್ಸ್ ಚಿತ್ರ
ಮೂರು ವಿಕೆಟ್ ಕಬಳಿಸಿ ಇಂಗ್ಲೆಂಡ್‌ನ ಜೊಫ್ರಾ ಆರ್ಚರ್ –ರಾಯಿಟರ್ಸ್ ಚಿತ್ರ   

ಮ್ಯಾಂಚೆಸ್ಟರ್: ಮೊದಲ ಪಂದ್ಯದಲ್ಲಿ ಹೋರಾಡಿ ಸೋತ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಓಲ್ಡ್ ಟ್ರಾಫರ್ಡ್‌ನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯರು ಒಂಬತ್ತು ವಿಕೆಟ್‌ಗಳಿಗೆ 231 ರನ್ ಗಳಿಸಿದ್ದರು. ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಪ್ರವಾಸಿ ತಂಡ ಒಂದು ಹಂತದಲ್ಲಿ ಸುಲಭ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಪಂದ್ಯ ನಾಟಕೀಯ ತಿರುವು ಪಡೆದುಕೊಂಡು ವಿಶ್ವ ಚಾಂಪಿಯನ್ನರಿಗೆ 24 ರನ್‌ಗಳ ಜಯ ಒಲಿಯಿತು.

30 ಓವರ್‌ಗಳು ಪೂರ್ತಿಯಾದಾಗ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತ್ತು. ಮೂರನೇ ವಿಕೆಟ್‌ಗೆ 107 ರನ್‌ ಸೇರಿಸಿದ್ದ ನಾಯಕ ಆ್ಯರನ್ ಫಿಂಚ್ (73; 105 ಎಸೆತ, 1 ಸಿಕ್ಸರ್, 8 ಬೌಂಡರಿ) ಮತ್ತು ಮಾರ್ನಸ್ ಲಾಬುಶೇನ್ ಇದಕ್ಕೆ ಕಾರಣರಾಗಿದ್ದರು. ಆದರೆ ನಂತರ 147ಕ್ಕೆ6 ಮತ್ತು 166ಕ್ಕೆ8 ಎಂಬ ಸ್ಥಿತಿಗೆ ತಂಡ ಕುಸಿಯಿತು. 48.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ತಲಾ ಮೂರು ವಿಕೆಟ್ ಗಳಿಸಿದ ತ್ರಿವಳಿ ವೇಗಿಗಳಾದ ಕ್ರಿಸ್ ವೋಕ್ಸ್‌, ಜೊಫ್ರಾ ಆರ್ಚರ್ ಮತ್ತು ಸ್ಯಾಮ್ ಕರನ್ ಇಂಗ್ಲೆಂಡ್‌ನ ಜಯದ ರೂವಾರಿಗಳಾದರು.

ADVERTISEMENT

ಅರ್ಧಶತಕವಿಲ್ಲದ ಇನಿಂಗ್ಸ್‌

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡದ ಯಾರೊಬ್ಬರಿಗೂ ಅರ್ಥಶತಕ ಕೂಡ ಗಳಿಸಲು ಆಗಲಿಲ್ಲ. ಇಯಾನ್ ಮಾರ್ಗನ್ ಮತ್ತು ಜೋ ರೂಟ್ ಕ್ರಮವಾಗಿ 42 ಮತ್ತು 39 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಕಬಳಿಸಿದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಒಟ್ಟು ಮೂರು ವಿಕೆಟ್ ಪಡೆದರು.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 19 ರನ್‌ಗಳ ಸೋಲೊಪ್ಪಿಕೊಂಡಿತ್ತು. ಎರಡೂ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಲಾ ಆರು ರನ್‌ಗಳಿಗೆ ಔಟಾಗಿರುವುದು ಆಸ್ಟ್ರೇಲಿಯಾ ಪಾಳಯದಲ್ಲಿ ಆತಂಕ ಉಂಟುಮಾಡಿದೆ. ಶುಕ್ರವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯ ರೋಚಕವಾಗಲಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರ್‌ಗಳಲ್ಲಿ 9ಕ್ಕೆ 231 (ಜೇಸನ್ ರಾಯ್ 21, ಜೋ ರೂಟ್ 39, ಇಯಾನ್ ಮಾರ್ಗನ್ 42, ಕ್ರಿಸ್ ವೋಕ್ಸ್ 26, ಟಾಮ್ ಕರನ್ 37, ಆದಿಲ್ ರಶೀದ್ 35; ಮಿಷೆಲ್ ಸ್ಟಾರ್ಕ್ 38ಕ್ಕೆ2, ಜೋಶ್ ಹ್ಯಾಜಲ್‌ವುಡ್ 27ಕ್ಕೆ1, ಪ್ಯಾಟ್ ಕಮಿನ್ಸ್ 56ಕ್ಕೆ1, ಮಿಷೆಲ್ ಮಾರ್ಶ್ 49ಕ್ಕೆ1, ಆ್ಯಡಂ ಜಂಪಾ 36ಕ್ಕೆ3); ಆಸ್ಟ್ರೇಲಿಯಾ:48.4 ಓವರ್‌ಗಳಲ್ಲಿ 207 (ಆ್ಯರನ್ ಫಿಂಚ್ 73, ಮಾರ್ನಸ್ ಲಾಬುಶೇನ್ 48, ಅಲೆಕ್ಸ್ ಕ್ಯಾರಿ 36; ಕ್ರಿಸ್ ವೋಕ್ಸ್ 32ಕ್ಕೆ3, ಜೊಫ್ರಾ ಆರ್ಚರ್ 34ಕ್ಕೆ3, ಆದಿಲ್ ರಶೀದ್ 67ಕ್ಕೆ1, ಸ್ಯಾಮ್ ಕರನ್ 35ಕ್ಕೆ3). ಫಲಿತಾಂಶ: ಇಂಗ್ಲೆಂಡ್‌ಗೆ 24 ರನ್‌ಗಳ ಜಯ. ಪಂದ್ಯಶ್ರೇಷ್ಠ: ಜೊಫ್ರಾ ಆರ್ಚರ್. ಮುಂದಿನ ಪಂದ್ಯ: ಸೆಪ್ಟೆಂಬರ್ 16, ಶುಕ್ರವಾರ: ಮ್ಯಾಂಚೆಸ್ಟರ್‌ನಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.