ADVERTISEMENT

ಆ ಘಟನೆ ಬಳಿಕ ಒಮ್ಮೆಯೂ ಐಸಿಸಿ ಟ್ರೋಫಿ ಗೆಲ್ಲದ ಆಸ್ಟ್ರೇಲಿಯಾ: ಇದೆಂಥಾ ಕಾಕತಾಳೀಯ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2026, 19:59 IST
Last Updated 17 ಫೆಬ್ರುವರಿ 2026, 19:59 IST
<div class="paragraphs"><p>ಶ್ರೀಲಂಕಾ ಆಟಗಾರರ ಕೈಕುಲುಕುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು</p><p></p></div>

ಶ್ರೀಲಂಕಾ ಆಟಗಾರರ ಕೈಕುಲುಕುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು

   

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯ ಪ್ರಶಸ್ತಿ ರೇಸ್‌ನಿಂದ ಗುಂಪು ಹಂತದಲ್ಲೇ ಹೊರಬಿದ್ದಿದೆ. ಇದರೊಂದಿಗೆ, ಐಸಿಸಿ ಟೂರ್ನಮೆಂಟ್‌ಗಳಲ್ಲಿ ಟ್ರೋಫಿ ಜಯಿಸಲು ಸತತ ನಾಲ್ಕನೇ ಬಾರಿಯೂ ವಿಫಲವಾಗಿದೆ.

ADVERTISEMENT

ಗುಂಪು ಹಂತದಲ್ಲಿ ತನ್ನ ಪಾಲಿನ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಾಂಗರೂ ಪಡೆ ಚುಟುಕು ವಿಶ್ವಕಪ್‌ನಿಂದ ಹೊರಬಿದ್ದಿರುವುದನ್ನು, ನೆಟ್ಟಿಗರು ಎರಡೂವರೆ ವರ್ಷ ಹಿಂದಿನ ಘಟನೆಯೊಂದಿಗೆ ತಳುಕುಹಾಕಿ ಚರ್ಚಿಸುತ್ತಿದ್ದಾರೆ.

ಏನದು ಪ್ರಸಂಗ?

ಅಂದು 2023ರ ನವೆಂಬರ್‌ 19. ಏಕದಿನ ಕ್ರಿಕೆಟ್‌ನ 13ನೇ ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ವೇದಿಕೆ ಸಜ್ಜಾಗಿತ್ತು.

ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಬಾಚಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದವು. ಆ ಕಾದಾಟಕ್ಕೆ, 1.30 ಲಕ್ಷ ಆಸನ ವ್ಯವಸ್ಥೆಯುಳ್ಳ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ, ಟೀಂ ಇಂಡಿಯಾ ಜೆರ್ಸಿ ತೊಟ್ಟ ಅಭಿಮಾನಿಗಳಿಂದ ನೀಲಿ ಸಾಗರದಂತೆ ತುಂಬಿ ತುಳುಕುತ್ತಿತ್ತು.

ಪಂದ್ಯದ ಮುನ್ನಾದಿನ ಅಂದರೆ, ನವೆಂಬರ್‌ 18ರಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌, ಮೈದಾನದಲ್ಲಿನ ಎದುರಾಳಿ ಆಟಗಾರರನ್ನಷ್ಟೇ ಅಲ್ಲ, ಕ್ರೀಡಾಂಗಣಕ್ಕೆ ಬರುವ ಆ ತಂಡದ ಅಭಿಮಾನಿಗಳನ್ನೂ ಎದುರಿಸಲು ಸಜ್ಜಾಗಿರುವುದಾಗಿ ಹೇಳಿದ್ದರು.

'ಅಭಿಮಾನಿಗಳ ಬೆಂಬಲ ನಿಸ್ಸಂಶಯವಾಗಿ ಏಕಪಕ್ಷೀಯವಾಗಿರಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟು ದೊಡ್ಡ ಅಭಿಮಾನಿಗಳನ್ನು ಸ್ತಬ್ಧಗೊಳಿಸುವುದರಲ್ಲಿ ಸಿಗುವ ತೃಪ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ನಮ್ಮ ಗುರಿ ಅದೇ' ಎಂದಿದ್ದರು. ಆ ಮಾತನ್ನು ನಿಜವಾಗಿಸಲು ಪಣ ತೊಟ್ಟಂತೆ, ಇಡೀ ಕಾಂಗರೂ ಪಡೆ ಜಿದ್ದಿಗೆ ಬಿದ್ದು ಆಡಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತದ ಬ್ಯಾಟಿಂಗ್‌ ಭರವಸೆಯಾಗಿದ್ದ 'ಸೂಪರ್‌ ಸ್ಟಾರ್‌' ವಿರಾಟ್‌ ಕೊಹ್ಲಿ ಔಟಾದಾಗ, ಲಕ್ಷದಷ್ಟು ಅಭಿಮಾನಿಗಳಿದ್ದ ಕ್ರೀಡಾಂಗಣ ಕಮಿನ್ಸ್‌ ಮಾತಿನಂತೆ ಮೊದಲ ಸಲ ಅಕ್ಷರಶಃ ಸ್ತಬ್ಧಗೊಂಡಿತ್ತು. ಅಲ್ಲಿಂದಾಚೆಗೆ, 'ಎಲ್ಲೋ' ಗ್ಯಾಂಗ್‌ನ ಉತ್ಸಾಹ ನೂರ್ಮಡಿಗೊಂಡಿತ್ತು. ಅದೇ ಉತ್ಸಾಹದಲ್ಲಿ ಪಂದ್ಯವನ್ನೂ ಗೆದ್ದು, ಕ್ರೀಡಾಂಗಣದಲ್ಲಿದ್ದವರನ್ನಷ್ಟೇ ಅಲ್ಲ, ಜಗತ್ತಿನ ಮೂಲೆ ಮೂಲೆಯಲ್ಲಿರುವ ಟೀಂ ಇಂಡಿಯಾ ಅಭಿಮಾನಿಗಳು ಮೌನಕ್ಕೆ ಜಾರುವಂತೆ ಮಾಡಿತ್ತು.

ಪಂದ್ಯದ ನಂತರ ಮಾತನಾಡಿದ್ದ ಕಮಿನ್ಸ್‌, ವಿಶ್ವಕಪ್‌ ಗೆಲುವಿಗಿಂತಲೂ ಕೊಹ್ಲಿ ಔಟಾದಾಗ ಆದ ಸಂದರ್ಭಕ್ಕೆ ಒತ್ತು ನೀಡಿದ್ದರು. 'ಕಿಂಗ್‌' ವಿಕೆಟ್‌ ಪತನವಾದಾಗ ಕ್ರೀಡಾಂಗಣವನ್ನು ಆವರಿಸಿದ ಮೌನ, ಕ್ರಿಕೆಟ್‌ ಅಂಗಳದಲ್ಲಿ ತಮ್ಮ ಪಾಲಿಗೆ ಅತ್ಯಂತ ಸುಮಧುರ ಕ್ಷಣ ಎಂದು ಬಣ್ಣಿಸಿದ್ದರು.

ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡ ಎನಿಸಿರುವ ಆಸ್ಟ್ರೇಲಿಯಾಗೆ 2023ರಲ್ಲಿ ದಕ್ಕಿದ್ದು, ಈ ಮಾದರಿಯ 6ನೇ ವಿಶ್ವಕಪ್‌. ಹೋಟೆಲ್‌ನಲ್ಲಿ ಭಾರಿ ಸಂಭ್ರಮಾಚರಣೆ ಮಾಡಿತ್ತು. ಬ್ಯಾಟಿಂಗ್‌ ಆಲ್‌ರೌಂಡರ್‌ ಮಿಚೇಲ್‌ ಮಾರ್ಶ್‌ ಅವರು ಟ್ರೋಫಿ ಮೇಲೆ ಕಾಲುಗಳನ್ನಿಟ್ಟು, ಒಂದು ಕೈಯಲ್ಲಿ ಬಿಯರ್‌ ಬಾಟಲಿ ಹಿಡಿದು ಪೋಸ್‌ ನೀಡಿದ್ದರು.

ಮಾರ್ಷ್‌ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಆದರೆ, ಅದಕ್ಕೆಲ್ಲ ಸೊಪ್ಪು ಹಾಕದ ಮಾರ್ಷ್‌, ಅವಕಾಶ ಸಿಕ್ಕರೆ ಮತ್ತೆ ಅದೇ ರೀತಿ ಮಾಡುವುದಾಗಿ ಹೇಳಿಕೊಂಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೊ, ವಿಶ್ವಕಪ್‌ಗೆ ಅವಮಾನ ಮಾಡುವಂತೇನೂ ಇಲ್ಲ ಎಂದಿದ್ದರು.

ಮಾರ್ಷ್‌ ನಡೆ ಕುರಿತು ಬೇಸರ ವ್ಯಕ್ತಪಡಿಸಿದ್ದ ವೇಗದ ಬೌಲರ್‌ ಮೊಹಮ್ಮದ್‌ ಶಮಿ, ವಿಶ್ವಕಪ್‌ಗಾಗಿ ವಿಶ್ವದ ಎಲ್ಲ ತಂಡಗಳೂ ಪೈಪೋಟಿ ನಡೆಸುತ್ತವೆ. ಟ್ರೋಫಿಯನ್ನು ತಲೆಯ ಮೇಲೆ ಎತ್ತಿ ಹಿಡಿಯಲು ಬಯಸುತ್ತವೆ. ಅದರ ಮೇಲೆ ಕಾಲಿಟ್ಟಿದ್ದು ಸರಿ ಎನಿಸಲಿಲ್ಲ ಎಂದು ಹೇಳಿದ್ದರು.

ಕಾಕತಾಳೀಯ

ಅಚ್ಚರಿಯ ಸಂಗತಿ ಎಂದರೆ, ಆ ವಿಶ್ವಕಪ್‌ ಬಳಿಕ ನಡೆದ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಟ್ರೋಫಿ ಗೆದ್ದಿಲ್ಲ.

2024ರ ಟಿ20 ವಿಶ್ವಕಪ್‌ ಟೂರ್ನಿಯ 'ಸೂಪರ್‌ 8' ಸುತ್ತಿನಲ್ಲಿ ಮುಗ್ಗರಿಸಿದ್ದ ಆಸ್ಟ್ರೇಲಿಯಾ, 2025ರಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಮುಖಭಂಗ ಅನುಭವಿಸಿತ್ತು. ಅದೇ ವರ್ಷ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಮಕಾಡೆ ಮಲಗಿತ್ತು. ಇದೀಗ, ಭಾರತ - ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಮುಗ್ಗರಿಸಿದೆ.

ವಿಶೇಷವೆಂದರೆ, ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸುತ್ತಿರುವುದು ಟ್ರೋಫಿ ಮೇಲೆ ಕಾಲಿಟ್ಟಿದ್ದ ಅದೇ ಮಾರ್ಷ್‌!

ಕರ್ಮ ರಿಟರ್ನ್ಸ್‌

ಪ್ರಸ್ತುತ ವಿಶ್ವಕಪ್‌ನಿಂದ ಹೊರಬೀಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಆಸ್ಟ್ರೇಲಿಯಾ ತಂಡವನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಟ್ರೋಫಿ ಮೇಲೆ ಕಾಲಿಟ್ಟಿದ್ದ ಪ್ರಸಂಗವನ್ನು ಉಲ್ಲೇಖಿಸಿ, ಆ ತಂಡದ ಪತನ ಆರಂಭವಾದದ್ದು ಅಲ್ಲಿಂದಲೇ ಎಂದು ಮೂದಲಿಸುತ್ತಿದ್ದಾರೆ. ಕರ್ಮ ರಿಟರ್ನ್ಸ್‌ ಎಂದೂ ತಿವಿದಿದ್ದಾರೆ.

ಈ ಬಾರಿ ಆಸ್ಟ್ರೇಲಿಯಾ ಸಾಧನೆ

VS ಐರ್ಲೆಂಡ್‌ - 67 ರನ್‌ ಜಯ

VS ಜಿಂಬಾಬ್ವೆ - 23 ರನ್‌ ಸೋಲು

VS ಶ್ರೀಲಂಕಾ - 8 ವಿಕೆಟ್‌ ಅಂತರದ ಜಯ

VS ಒಮಾನ್‌ - ಫೆಬ್ರುವರಿ 20ರಂದು ಪಂದ್ಯ

https://www.facebook.com/share/p/18HrmDqXjK/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.