ADVERTISEMENT

ಕೋವಿಡ್ ವ್ಯಕ್ತಿ ಜತೆ ಸಂಪರ್ಕ; 2ನೇ ಟೆಸ್ಟ್‌ಗೆ ಕಮಿನ್ಸ್ ಅಲಭ್ಯ; ಸ್ಮಿತ್ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 2:37 IST
Last Updated 16 ಡಿಸೆಂಬರ್ 2021, 2:37 IST
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್   

ಅಡಿಲೇಡ್: ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ. ಅಡಿಲೇಡ್ ಟೆಸ್ಟ್ ಪಂದ್ಯ ಆರಂಭಕ್ಕೂ ಕೆಲವೇ ತಾಸಿಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.

ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. 2018ರ ಬಾಲ್ ಟ್ಯಾಂಪರಿಂಗ್ವಿವಾದದ ಬಳಿಕ ಸ್ಮಿತ್ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಟ್ರಾವಿಸ್ ಹೆಡ್ ಉಪನಾಯಕರಾಗಲಿದ್ದು, ಮೈಕಲ್ ನೆಸರ್ ಪದಾರ್ಪಣೆ ಮಾಡಲಿದ್ದಾರೆ.

ADVERTISEMENT

ಪ್ಯಾಟ್ ಕಮಿನ್ಸ್ ಬುಧವಾರ ಅಡಿಲೇಡ್ ರೆಸ್ಟೋರೆಂಟ್‌ಗೆ ಡಿನ್ನರ್‌ಗೆ ಹೋಗಿದ್ದರು. ಅಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಏಳು ದಿನಗಳವರೆಗೆ ಪ್ರತ್ಯೇಕವಾಸದಲ್ಲಿರಲು ಸೂಚಿಸಲಾಗಿದೆ.

ವಿಷಯ ಗಮನಕ್ಕೆ ಬಂದ ತಕ್ಷಣ ಕಮಿನ್ಸ್‌ ಪ್ರತ್ಯೇಕವಾಸದಲ್ಲಿದ್ದಾರೆ. ಪಿಸಿಆರ್ ಟೆಸ್ಟ್ ವರದಿ ಕೂಡ ನೆಗೆಟಿವ್ ಬಂದಿದೆ ಎಂದು ಸೌತ್ ಆಸ್ಟ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಹಾಗಿದ್ದರೂ ಕಮಿನ್ಸ್, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ. ಅಲ್ಲದೆ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ವ್ಯಕ್ತಪಡಿಸಿದೆ.

ಟಿಮ್ ಪೇನ್ ನಿರ್ಗಮನದ ಬಳಿಕ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವವನ್ನು ಕಮಿನ್ಸ್ ವಹಿಸಿದ್ದರು. ಅಲ್ಲದೆ ಇಂಗ್ಲೆಂಡ್ ವಿರುದ್ಧ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಕಬಳಿಸಿದ್ದರಲ್ಲದೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.