ಎರಡನೇ ಟಿ20 ಪಂದ್ಯದ ವೇಳೆ ರಸೆಲ್ ಅವರಿಗೆ ವಿಕೆಟ್ ಕೀಪರ್ ಜೋಸ್ ಇಂಗ್ಲಿಷ್ ಹಸ್ತಲಾಘವ ನೀಡಿದರು.
ಕಿಂಗ್‌ಸ್ಟನ್ (ಜಮೈಕಾ): ಆಲ್‌ರೌಂಡರ್ ಆಂಡ್ರೆ ರಸೆಲ್ ತಮ್ಮ ನಿವೃತ್ತಿ ಮೊದಲಿನ ಅಂತಿಮ ಇನಿಂಗ್ಸ್‌ನಲ್ಲಿ 15 ಎಸೆತಗಳಲ್ಲಿ 36 ರನ್ ಗಳಿಸಿ ಮಿಂಚಿದರು. ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಮಂಗಳವಾರ ಆಸ್ಟ್ರೇಲಿಯಾ ಎದುರು ಸೋಲು ತಪ್ಪಲಿಲ್ಲ.
ತಮ್ಮ ತವರು ಸಬಿನಾ ಪಾರ್ಕ್ ಕ್ರೀಡಾಂಗಣದಲ್ಲಿ 37 ವರ್ಷ ವಯಸ್ಸಿನ ರಸೆಲ್ ನಾಲ್ಕು ಸಿಕ್ಸರ್, ಎರಡು ಬೌಂಡರಿಗಳನ್ನು ಬಾರಿಸಿದರು. ಇದು ಟಿ20ಯಲ್ಲಿ ಅವರ 85ನೇ ಇನಿಂಗ್ಸ್. ಅವರು ಒಂದು ಟೆಸ್ಟ್ ಮಾತ್ರ ಆಡಿದ್ದಾರೆ.
ವೆಸ್ಟ್ ಇಂಡೀಸ್ 8 ವಿಕೆಟ್‌ಗೆ 172 ರನ್ ಗಳಿಸಿತು. ಆರಂಭ ಆಟಗಾರ ಬ್ರಾಂಡನ್ ಕಿಂಗ್ ಮತ್ತು ಏಳನೇ ಕ್ರಮಾಂಕದಲ್ಲಿ ರಸೆಲ್ ಬಿಟ್ಟರೆ ಉಳಿದವರು ವಿಫಲರಾದರು. ಆ್ಯಡಂ ಜಂಪಾ 29 ರನ್ನಿಗೆ 3 ವಿಕೆಟ್ ಪಡೆದರು.
ಜೋಸ್ ಇಂಗ್ಲಿಸ್ (ಔಟಾಗದೇ 78, 33ಎ) ಮತ್ತು ಕ್ಯಾಮರೂನ್ ಗ್ರೀನ್ (ಔಟಾಗದೇ 56) ಮುರಿಯದ ಮೂರನೇ ವಿಕೆಟ್‌ಗೆ 131 ರನ್ ಸೇರಿಸಿ, ಆಸ್ಟ್ರೇಲಿಯಾ ತಂಡ 4.4 ಓವರುಗಳಿರುವಂತೆ ಎಂಟು ವಿಕೆಟ್‌ಗಳಿಂದ ಪಂದ್ಯ ಗೆಲ್ಲಲು ನೆರವಾದರು. 5 ಪಂದ್ಯಗಳ ಸರಣಿಯಲ್ಲಿ ಕಾಂಗರೂ ಪಡೆ 2–0 ಮುನ್ನಡೆ ಪಡೆಯಿತು.
ಇಂಗ್ಲಿಸ್ ಬಿರುಸಿನ ಆಟವಾಡಿ ಏಳು ಬೌಂಡರಿ, ಐದು ಸಿಕ್ಸರ್ ಬಾರಿಸಿದರು. ಪಂದ್ಯದ ಆಟಗಾರ ಪ್ರಶಸ್ತಿ ಅವರಿಗೆ ಒಲಿಯಿತು.
ಪಂದ್ಯಕ್ಕೆ ಮೊದಲು ಎರಡೂ ತಂಡಗಳ ಆಟಗಾರರು ಅವರಿಗೆ ಗೌರವ ರಕ್ಷೆ ನೀಡಿದರು. ಟಿ20 ಪರಿಣತರೆನಿಸಿದ ರಸೆಲ್ 2012 ರಿಂದ 2016ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ಟಿ20 ವಿಶ್ವ ಚಾಂಪಿಯನ್ ತಂಡದಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.