ADVERTISEMENT

Ashes 1st Test| ಮೊದಲ ದಿನ ಬೌಲರಗಳ ಪ್ರಾಬಲ್ಯ: ಬರೋಬ್ಬರಿ 19 ವಿಕೆಟ್‌ ಪತನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 10:22 IST
Last Updated 21 ನವೆಂಬರ್ 2025, 10:22 IST
<div class="paragraphs"><p>ಆಸ್ಟ್ರೇಲಿಯಾ ವಿಕೆಟ್ ತೆಗೆದು ಸಂಭ್ರಮಿಸಿದ ಸ್ಟೋಕ್ಸ್</p></div>

ಆಸ್ಟ್ರೇಲಿಯಾ ವಿಕೆಟ್ ತೆಗೆದು ಸಂಭ್ರಮಿಸಿದ ಸ್ಟೋಕ್ಸ್

   

ಚಿತ್ರ: @ESPNcricinfo

ಪರ್ತ್‌: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಿನ ಆ್ಯಷಸ್‌ ಸರಣಿಯ ಮೊದಲ ಟೆಸ್ಟ್‌ನ ಆರಂಭಿಕ ದಿನವಾದ ಶುಕ್ರವಾರ 19 ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಅಷ್ಟೂ ವಿಕೆಟ್‌ಗಳನ್ನು ಉಭಯ ತಂಡಗಳ ವೇಗದ ಬೌಲರ್‌ಗಳು ಬುಟ್ಟಿಗೆ ಹಾಕಿಕೊಂಡಿದ್ದು ವಿಶೇಷ.

ADVERTISEMENT

ಪ್ರವಾಸಿ ಇಂಗ್ಲೆಂಡ್‌ ತಂಡವನ್ನು 172 ರನ್‌ಗಳಿಗೆ ಕಟ್ಟಿಹಾಕಿದ ಆತಿಥೇಯ ತಂಡವು ನಂತರದಲ್ಲಿ ಬೆನ್‌ ಸ್ಟೋಕ್ಸ್‌ ಅವರ ಪರಿಣಾಮಕಾರಿ ದಾಳಿಗೆ ಕುಸಿಯಿತು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್‌ಗೆ 123 ರನ್‌ ಗಳಿಸಿದ್ದು, ಇನಿಂಗ್ಸ್‌ ಚುಕ್ತಕ್ಕೆ ಇನ್ನೂ 49 ರನ್‌ ದೂರದಲ್ಲಿದೆ.

ಪರ್ತ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ ಆತಿಥೇಯ ತಂಡದ ಅನುಭವಿ ವೇಗಿ ಮಿಚೆಲ್‌ ಸ್ಟಾರ್ಟ್‌ ಮೋಡಿ ಮಾಡಿದರು. 58 ರನ್‌ಗೆ ಏಳು ವಿಕೆಟ್‌ ಪಡೆಯುವ ಮೂಲಕ ಟೆಸ್ಟ್‌ ವೃತ್ತಿಜೀವನದಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದರು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡವನ್ನು ಇನ್ನಿಲ್ಲದಂತೆ ಕಾಡಿದರು. 

ಹ್ಯಾರಿ ಬ್ರೂಕ್‌ (52;61ಎ, 4x5, 6x1) ಮತ್ತು ಓಲಿ ಪೋಪ್‌ (45;58ಎ, 4x4) ಕೊಂಚ ಪ್ರತಿರೋಧ ತೋರಿದರೆ, ಉಳಿದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಬ್ರೂಕ್‌ ಮತ್ತು ಪೋಪ್‌ ಅವರು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 55 ರನ್‌ ಪೇರಿಸಿದರು. ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 31 ವರ್ಷದ ವೇಗಿ ಬ್ರೆಂಡನ್‌ ಡಾಜೆಟ್‌ ಎರಡು ವಿಕೆಟ್‌ ಪಡೆದು ಗಮನ ಸೆಳೆದರು. 

ನಂತರದಲ್ಲಿ ಪ್ರತಿಹೋರಾಟ ಸಂಘಟಿಸಿದ ಸ್ಟೋಕ್ಸ್‌ ಬಳಗವು ಎದುರಾಳಿ ತಂಡಕ್ಕೆ ತಿರುಗೇಟು ನೀಡಿತು. ಸ್ಟೋಕ್ಸ್‌ ಐದು ವಿಕೆಟ್‌ ಗೊಂಚಲು ಗಳಿಸಿದರೆ, ಜೋಫ್ರಾ ಆರ್ಚರ್‌ ಮತ್ತು ಬ್ರೈಡನ್ ಕಾರ್ಸ್‌ ತಲಾ ಎರಡು ವಿಕೆಟ್‌ ಪಡೆದು ತಂಡಕ್ಕೆ ಮೇಲುಗೈ ಒದಗಿಸಿದರು.

ಆತಿಥೇಯ ತಂಡವು 31 ರನ್‌ ಗಳಿಸುವಷ್ಟರಲ್ಲಿ ನಾಯಕ ಸ್ಟೀವ್‌ ಸ್ಮಿತ್‌ (17) ಸೇರಿದಂತೆ ಅಗ್ರ ನಾಲ್ಕು ಬ್ಯಾಟರ್‌ಗಳಾದ ಜೇಕ್‌ ವಿಥೆರಾಲ್ಡ್‌ (0), ಮಾರ್ನಸ್ ಲಾಬುಷೇನ್ (9), ಉಸ್ಮಾನ್‌ ಖ್ವಾಜಾ (2) ಅವರು ಪೆವಿಲಿಯನ್‌ ಸೇರಿಕೊಂಡರು. 31 ವರ್ಷದ ವಿಥೆರಾಲ್ಡ್‌ ಅವರಿಗೆ ಇದು ಚೊಚ್ಚಲ ಟೆಸ್ಟ್‌ ಪಂದ್ಯವಾಗಿದೆ. 26 ರನ್‌ ಗಳಿಸಿದ ಅಲೆಕ್ಸ್‌ ಕ್ಯಾರಿ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ನಥಾನ್‌ ಲಯನ್‌ (ಔಟಾಗದೇ 3) ಮತ್ತು ಬ್ರೆಂಡನ್ (ಔಟಾಗದೇ 0) ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. 

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌: 32.5 ಓವರ್‌ಗಳಲ್ಲಿ 172 (ಓಲಿ ಪೋಪ್‌ 46, ಹ್ಯಾರಿ ಬ್ರೂಕ್‌ 52, ಜೆಮಿ ಸ್ಮಿತ್‌ 33; ಮಿಚೆಲ್ ಸ್ಟಾರ್ಕ್‌ 58ಕ್ಕೆ 7, ಬ್ರೆಂಡನ್‌ ಡಾಜೆಟ್‌ 27ಕ್ಕೆ 2, ಕ್ಯಾಮೆರಾನ್‌ ಗ್ರೀನ್‌ 10ಕ್ಕೆ 1); ಆಸ್ಟ್ರೇಲಿಯಾ: 39 ಓವರ್‌ಗಳಲ್ಲಿ 9 ವಿಕೆಟ್‌ಗೆ 123 (ಕ್ಯಾಮರೂನ್‌ ಗ್ರೀನ್‌ 24, ಅಲೆಕ್ಸ್‌ ಕ್ಯಾರಿ 26; ಜೋಫ್ರಾ ಆರ್ಚರ್‌ 11ಕ್ಕೆ 2, ಬ್ರೈಡನ್ ಕಾರ್ಸ್‌ 45ಕ್ಕೆ 2, ಬೆನ್‌ ಸ್ಟೋಕ್ಸ್‌ 23ಕ್ಕೆ 5)

ಅಂಕಿ ಅಂಶ

19: 100 ವರ್ಷಗಳ ಆ್ಯಷಸ್ ಟೆಸ್ಟ್‌ ಇತಿಹಾಸದಲ್ಲಿ ಮೊದಲ ದಿನದಂದು ಪತನವಾದ ಅತಿ ಹೆಚ್ಚು ವಿಕೆಟ್‌ಗಳು. ಈ ಹಿಂದೆ 2001 (ಟ್ರೆಂಟ್ ಬ್ರಿಡ್ಜ್) ಮತ್ತು 2005ರಲ್ಲಿ (ಲಾರ್ಡ್ಸ್‌) 17 ವಿಕೆಟ್‌ಗಳು ಪತನವಾಗಿದ್ದು, ಈವರೆಗಿನ ದಾಖಲೆಯಾಗಿತ್ತು.

58ಕ್ಕೆ 7: ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಪಡೆದ ಮೊದಲ ಏಳು ವಿಕೆಟ್ ಗೊಂಚಲು. ಈ ಹಿಂದೆ 9ಕ್ಕೆ 6 ವಿಕೆಟ್‌ (ವೆಸ್ಟ್‌ ಇಂಡೀಸ್‌ ವಿರುದ್ಧ) ಪಡೆದಿದ್ದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.