ಲ್ಯಾಬುಶೇನ್–ಕ್ಯಾಮೆರೂನ್ ಗ್ರೀನ್
ಚಿತ್ರ ಕೃಪೆ: @cricbuzz
ಪರ್ತ್: ಭಾರತದ ವಿರುದ್ಧ ಭಾನುವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮಾರ್ನಸ್ ಲ್ಯಾಬುಶೇನ್ ಸ್ಥಾನ ಪಡೆದಿದ್ದಾರೆ.
ಮುಂದಿನ ತಿಂಗಳಿನಿಂದ ಬಹು ನಿರೀಕ್ಷಿತ ಆ್ಯಶಸ್ ಸರಣಿ ಆರಂಭವಾಗಲಿದೆ. ಆ ಸರಣಿಗೆ ಪ್ರಮುಖ ಆಟಗಾರನಾಗಿರುವುದರಿಂದ ಆಯ್ಕೆದಾರರು ಗ್ರೀನ್ ಅವರಿಗೆ ವಿಶ್ರಾಂತಿ ನೀಡಿ ಅವರ ಜಾಗಕ್ಕೆ ಲ್ಯಾಬುಶೇನ್ ಅವರನ್ನು ಆಯ್ಕೆ ಮಾಡಿದ್ದಾರೆ.
ಸದ್ಯ, ಗ್ರೀನ್ ಗಾಯದಿಂದ ಈಗ ತಾನೆ ಚೇತರಿಸಿಕೊಂಡಿದ್ದಾರೆ. ಆದರೂ, ಅವರನ್ನು ಆ್ಯಶಸ್ ಸರಣಿಗೆ ತಯಾರಿ ನಡೆಸುವ ಉದ್ದೇಶದಿಂದ ಭಾರತ ವಿರುದ್ಧದ ಸರಣಿಯಿಂದ ಹೊರಗಿಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಭಾರತ ವಿರುದ್ಧದ ಏಕದಿನ ಸರಣಿಯಿಂದ ಗ್ರೀನ್ ಹೊರಗುಳಿಯುತ್ತಿರುವುದು ಮುನ್ನೆಚ್ಚರಿಕಾ ಕ್ರಮದ ಭಾಗ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಸದ್ಯ, ಈ ಬದಲಾವಣೆ ಮೂಲಕ ಭಾರತ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿದ ಆಸೀಸ್ ತಂಡದಲ್ಲಿ ಮಾಡಿರುವ ಮೂರನೇ ಬದಲಾವಣೆ ಇದಾಗಿದೆ. ಇದಕ್ಕೂ ಮೊದಲು ಗಾಯಗೊಂಡಿದ್ದ ಜೋಶ್ ಇಂಗ್ಲಿಸ್ ಬದಲು ಜೋಶ್ ಫಿಲಿಪ್ ಮತ್ತು ವೈಯಕ್ತಿಕ ಕಾರಣದಿಂದ ಆಡಂ ಝಂಪಾ ಬದಲಿಗೆ ಮ್ಯಾಥ್ಯೂ ಕುಹ್ನೆಮನ್ ಆಸೀಸ್ ತಂಡವನ್ನು ಸೇರಿದ್ದಾರೆ. ಇದೀಗ ಗ್ರೀನ್ ಬದಲು ಲ್ಯಾಬುಶೇನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ವಿರುದ್ಧ ಏಕದಿನ ಸರಣಿಗೆ ಆಸೀಸ್ ತಂಡ:
ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್ ಇದ್ದಾರೆ. ಎರಡನೇ ಏಕದಿನ ಪಂದ್ಯದಿಂದ ಆಡಂ ಜಂಪಾ, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್ ಕೂಡ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.