ADVERTISEMENT

ಆಸಿಸ್‌ಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಫಿಂಚ್ ಏಕದಿನ ಕ್ರಿಕೆಟ್‌ಗೆ ವಿದಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 5:37 IST
Last Updated 10 ಸೆಪ್ಟೆಂಬರ್ 2022, 5:37 IST
ಆ್ಯರನ್‌ ಫಿಂಚ್‌
ಆ್ಯರನ್‌ ಫಿಂಚ್‌   

ಮೆಲ್ಬರ್ನ್:ಆಸ್ಟ್ರೇಲಿಯಾಗೆ 2021ರಲ್ಲಿ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಆ್ಯರನ್‌ ಫಿಂಚ್‌ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಮುಂದಿನ ವರ್ಷ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಭಾರತದಲ್ಲಿ ಆಯೋಜನೆಗೊಳ್ಳಲಿದೆ. ಅದಕ್ಕೂ ಮುನ್ನ ಫಿಂಚ್‌ ಈ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ಈ ವರ್ಷ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ.

ಫಿಂಚ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಸದ್ಯ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ.ಅಂತಿಮ ಪಂದ್ಯವು ಕ್ಯಾನ್ಸ್‌ನಲ್ಲಿ ನಾಳೆ (ಭಾನುವಾರ) ನಡೆಯಲಿದೆ. ಫಿಂಚ್‌ ಆಡುವ ಕೊನೆಯ ಏಕದಿನ ಟೂರ್ನಿ ಇದಾಗಿದೆ.

ADVERTISEMENT

35 ವರ್ಷದ ಫಿಂಚ್‌ ಆಸ್ಟ್ರೇಲಿಯಾ ಪರ145 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು,39.14ರ ಸರಾಸರಿಯಲ್ಲಿ 5,401ರನ್ ಕಲೆಹಾಕಿದ್ದಾರೆ. ಈ ಪೈಕಿ 54 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು 30 ಗೆಲುವು ತಂದುಕೊಟ್ಟಿದ್ದಾರೆ.

2015ರಲ್ಲಿ ವಿಶ್ವಕಪ್‌ ಗೆದ್ದ ತಂಡದ ಭಾಗವಾಗಿದ್ದ ಫಿಂಚ್‌ ಕಳೆದ ಕೆಲವು ದಿನಗಳಿಂದ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಕಳೆದ 7 ಇನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಬಂದಿರುವುದು ಕೇವಲ 26 ರನ್‌ ಮಾತ್ರ.

ನಿವೃತ್ತಿ ಕುರಿತು ಮಾತನಾಡಿರುವ ಫಿಂಚ್, ತಂಡದ ಜೊತೆಗಿನ ಪಯಣವು ನಂಬಲಸಾಧ್ಯವಾದ ಹಲವು ನೆನಪುಗಳನ್ನು ಹೊಂದಿದೆ. ಅತ್ಯುತ್ತಮ ಏಕದಿನ ತಂಡದ ಭಾಗವಾಗಿದ್ದ ನಾನು ಅದೃಷ್ಠಶಾಲಿ. ನನ್ನೊಂದಿಗೆ ಆಡಿದ ಎಲ್ಲರೂ ಹಾಗೂ ತೆರೆಮರೆಯಲ್ಲಿ ಸಾಕಷ್ಟು ಮಂದಿ ನನಗೆ ಶುಭಹಾರೈಸಿದ್ದಾರೆ. ನನ್ನ ಈವರೆಗಿನ ಪ್ರಯಾಣವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

'ಇದು ಮುಂದಿನ (ಏಕದಿನ) ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ನಡೆಸಲು ಮತ್ತು ಪ್ರಶಸ್ತಿ ಗೆಲ್ಲಲು ಹೊಸ ನಾಯಕನಿಗೆ ಅವಕಾಶ ಕಲ್ಪಿಸುವ ಸಮಯವಾಗಿದೆ' ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.