ADVERTISEMENT

ಆಸೀಸ್‌ಗೆ ಆಘಾತ; ಸ್ಟೋಯಿನಿಸ್ ನಿವೃತ್ತಿ, ಕಮಿನ್ಸ್-ಹ್ಯಾಜಲ್‌ವುಡ್ ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2025, 9:46 IST
Last Updated 6 ಫೆಬ್ರುವರಿ 2025, 9:46 IST
   

ಮೆಲ್ಬರ್ನ್: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಇನ್ನೇನು 12 ದಿನಗಳಷ್ಠೇ ಬಾಕಿ ಉಳಿದಿವೆ. ಈ ಬಾರಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರೇಲಿಯಾಕ್ಕೆ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ದಿಢೀರ್ ನಿವೃತ್ತಿ ಆಘಾತ ಮೂಡಿಸಿದೆ.

ಅಲ್ಲದೇ ನಾಯಕ ಪ್ಯಾಟ್ ಕಮಿನ್ಸ್ ಮತ್ತು ವೇಗಿ ಜೋಷ್ ಹ್ಯಾಜಲ್‌ವುಡ್ ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಅಲಭ್ಯವಾಗುತ್ತಿರುವುದು ಕೂಡ  ತಂಡವನ್ನು ಚಿಂತೆಗೀಡು ಮಾಡಿದೆ. ಅಲ್ಲದೇ  ಈ ಮೂವರು ಪ್ರಮುಖರ ಸ್ಥಾನ ತುಂಬುವ ಆಟಗಾರರನ್ನು ಆಯ್ಕೆ ಮಾಡುವುದು ಕ್ರಿಕೆಟ್ ಆಸ್ಟ್ರೇಲಿಯಾ (ಸಿ.ಎ)ಕ್ಕೆ ತಲೆನೋವಾಗಿದೆ.

35 ವರ್ಷ ವಯಸ್ಸಿನ ಮಾರ್ಕಸ್ ಅವರು ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟಿ20 ಕ್ರಿಕೆಟ್‌ ಆಡಲು ಲಭ್ಯರಿದ್ದಾರೆ. ಇದೇ 19ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಂಡದ ಆಟಗಾರರ ಪರಿಷ್ಕೃತ ಪಟ್ಟಿ ಸಲ್ಲಿಸಲು ಇದೇ 12 ಕೊನೆಯ ದಿನವಾಗಿದೆ.

ADVERTISEMENT

ಈಚೆಗೆ ಆಸ್ಟ್ರೇಲಿಯಾ ಪ್ರಕಟಿಸಿದ್ದ ತಂಡದಲ್ಲಿ ಮಾರ್ಕಸ್  ಇದ್ದರು. ಅವರು ನಿವೃತ್ತಿ ನಿರ್ಧಾರವನ್ನು ಹಠಾತ್ ಆಗಿ ಕೈಗೊಳ್ಳಲು ಗಾಯ ಕಾರಣವಿರಬಹುದು ಎನ್ನಲಾಗಿದೆ. ಪ್ರಸ್ತುತ ಅವರು ಎಸ್‌ಎ ಟಿ20 ಟೂರ್ನಿಯಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸ್ನಾಯುಸೆಳೆತದ ಗಂಭೀರ ಸಮಸ್ಯೆಯಾಗಿದೆ. 

‘ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಪಯಣ. ಗ್ರೀನ್ (ಹಸಿರು) ಮತ್ತು ಗೋಲ್ಡ್ (ಹಳದಿ) ಬಣ್ಣದ ಪೋಷಾಕುಗಳಲ್ಲಿ  ನಾನು ಆಡಿದ ಪ್ರತಿಕ್ಷಣವೂ ಅಮೂಲ್ಯವಾದದ್ದು. ದೇಶವನ್ನು ಅತ್ಯುನ್ನತ ಹಂತದಲ್ಲಿ ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿ.ಎ) ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಸ್ಟೋಯಿನಿಸ್ ಹೇಳಿದ್ದಾರೆ. 

‘ನಿವೃತ್ತಿ ನಿರ್ಧಾರವು ಸುಲಭವಾಗಿರಲಿಲ್ಲ. ಏಕದಿನ ಕ್ರಿಕೆಟ್‌ ಮಾದರಿಗೆ ವಿದಾಯ ಹೇಳಲು ಇದು ಸೂಕ್ತ ಸಮಯವೆಂದು ಅನಿಸಿತು. ಮುಂದಿನ ಅಧ್ಯಾಯದ ಮೇಲೆ ಸಂಪೂರ್ಣ ಏಕಾಗ್ರತೆ ವಹಿಸುವುದು ನನ್ನ ಗುರಿಯಾಗಿದೆ’ ಎಂದೂ ಅವರು ಉಲ್ಲೇಖಿಸಿದ್ದಾರೆ. ತಂಡದ ಮುಖ್ಯ ಕೋಚ್ ಹಾಗೂ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

2018–19ರಲ್ಲಿ ಮಾರ್ಕಸ್ ಅವರು ಆಸ್ಟ್ರೇಲಿಯಾದ  ಏಕದಿನ ಕ್ರಿಕೆಟ್‌ ಮಾದರಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದ್ದರು. ಅವರು ಒಟ್ಟು 71 ಏಕದಿನ ಪಂದ್ಯಗಳನ್ನು ಆಡಿ, 1495 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳು ಇವೆ. 

2015ರಲ್ಲಿ ಓಲ್ಡ್‌ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. 2021ರಲ್ಲಿ ಟಿ20 ಮತ್ತು 2023ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಅವರು ಆಡಿದ್ದರು. 

ಚಾಂಪಿಯನ್ಸ್‌ ಟ್ರೋಫಿ: ಪ್ಯಾಟ್ ಜೋಷ್ ಅಲಭ್ಯ

ಗಾಲೆ ಶ್ರೀಲಂಕಾ: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ವೇಗಿ ಜೋಷ್ ಹ್ಯಾಜಲ್‌ವುಡ್ ಅವರು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಲಭ್ಯರಿಲ್ಲ.  ಈಚೆಗೆ ನಡೆದಿದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮುಕ್ತಾಯದ ಸಂದರ್ಭದಲ್ಲಿ ಕಮಿನ್ಸ್ ಅವರು ಪಾದದ ನೋವಿನಿಂದ ಬಳಲಿದ್ದರು. ಹ್ಯಾಜಲ್‌ವುಡ್ ಅವರಿಗೆ ಮೀನಖಂಡದ ಸೆಳೆತದ ಸಮಸ್ಯೆ ಅಗಿತ್ತು.   ಹ್ಯಾಜಲ್‌ವುಡ್ ಅವರು ಬ್ರಿಸ್ಬೇನ್ ಟೆಸ್ಟ್ ನಲ್ಲಿ ಆಡಿದ ನಂತರ ಕಣಕ್ಕಿಳಿದಿಲ್ಲ.  ‘ಪ್ಯಾಟ್‌ ಜೋಷ್ ಮತ್ತು ಮಿಚ್ (ಮಾರ್ಷ್) ಅವರು ತಮ್ಮ ಗಾಯಗಳಿಗೆ ಅರೈಕೆ ಪಡೆಯುತ್ತಿದ್ದಾರೆ. ಆದರೆ ಚಾಂಪಿಯನ್ಸ್‌ ಟ್ರೋಫಿಗಾಗಿ ಅವರು ಫಿಟ್‌ ಆಗುವುದು ಕಷ್ಟ’ ಎಂದು ರಾಷ್ಟ್ರೀಯ  ಆಯ್ಕೆ ಸಮಿತಿ ಚೇರ್ಮನ್ ಜಾರ್ಜ್ ಬೇಲಿ ಗುರುವಾರ ತಿಳಿಸಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಇದೇ 22ರಂದು ಲಾಹೋರ್‌ನಲ್ಲಿ ಇಂಗ್ಲೆಂಡ್ ವಿರುದ್ಧ; ರಾವಲ್ಪಿಂಡಿಯಲ್ಲಿ ಫೆ. 25ರಂದು ದಕ್ಷಿಣ ಆಫ್ರಿಕಾ ಮತ್ತು ಫೆ. 28ರಂದು ಅಫ್ಗಾನಿಸ್ತಾನ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.