ತ್ತಗಾಂಗ್ (ಬಾಂಗ್ಲಾದೇಶ): ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ವಿಶ್ವಕಪ್‌ಗೆ ಮೂರು ತಿಂಗಳು ಉಳಿದಿರುವಂತೆ ಅವರು ಅಚ್ಚರಿಯ ರೀತಿ ವಿದಾಯ ಹೇಳಿರುವುದು ತಂಡಕ್ಕೆ ಆಘಾತ ಮೂಡಿಸಿದೆ.
ಅಫ್ಗಾನಿಸ್ತಾನ ಎದುರು ಏಕದಿನ ಸರಣಿಯ ಮೊದಲ ಪಂದ್ಯ ಸೋತ ಮರುದಿನವೇ 34 ವರ್ಷದ ಎಡಗೈ ಆಟಗಾರ ತಮೀಮ್ ಈ ನಿರ್ಧಾರ ಕೈಗೊಂಡಿದ್ದಾರೆ.
‘ಅಫ್ಗಾನಿಸ್ತಾನ ವಿರುದ್ಧ ನಿನ್ನೆಯ ಪಂದ್ಯ ನನ್ನ ಪಾಲಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯ. ಈಗಿಂದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ’ ಎಂದು ತಮೀಮ್ ಸುದ್ದಿಗಾರರಿಗೆ ತಿಳಿಸಿದರು. ಸುದ್ದಿಗೋಷ್ಠಿಯು ರಾಷ್ಟ್ರೀಯ ವಾಹಿನಿಯ ನೇರ ಪ್ರಸಾರವಾಗಿದ್ದು, ನಿರ್ಧಾರ ಪ್ರಕಟಿಸುತ್ತಿದ್ದಂತೆ ಕಣ್ಣೀರು ಹರಿಸಿದರು.
‘ಇದು ತಕ್ಷಣದ ನಿರ್ಧಾರವಲ್ಲ. ಕೆಲಸಮಯದಿಂದ ಈ ಬಗ್ಗೆ ಯೋಚಿಸುತ್ತಿದ್ದೆ. ಕೆಲದಿನಗಳ ಹಿಂದೆ ಕುಟುಂಬ ಸದಸ್ಯರ ಜೊತೆಗೂ ಚರ್ಚಿಸಿದ್ದೆ. ನಿರ್ಧಾರ ಕೈಗೊಳ್ಳಲು ಇದು ಸಕಾಲ ಎನಿಸಿತು’ ಎಂದು ಅವರು ಹೇಳಿದರು.
ಬುಧವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಅವರು, ಪೂರ್ಣ ಫಿಟ್ ಆಗದೇ ಆಡಲು ಮುಂದಾಗಿದ್ದು ವ್ಯಾಪಕ ಟೀಕಿಗೆ ಒಳಗಾಗಿತ್ತು. ಇದಾದ ಎರಡೇ ದಿನಗಳಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ. ತಮೀಮ್ ಆ ಪಂದ್ಯದಲ್ಲಿ 21 ಎಸೆತಗಳಿಂದ 13 ರನ್ ಗಳಿಸಿದ್ದರು.
ಬಾಂಗ್ಲಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ಅವರೇ ಈ ಬಗ್ಗೆ ಧ್ವನಿಎತ್ತಿದ್ದು, ಆಟಗಾರನ ವೃತ್ತಿಪರತೆಯ ಬಗ್ಗೆ ಪ್ರಶ್ನೆ ಎತ್ತಿದ್ದರು.
ತಮೀಮ್ 241 ಏಕದಿನ ಪಂದ್ಯಗಳನ್ನಾಡಿದ್ದು 8,133 ರನ್ ಕೆಲಹಾಕಿದ್ದಾರೆ. ಇವುಗಳಲ್ಲಿ 14 ಶತಕಗಳು ಒಳಗೊಂಡಿವೆ. ಇದು ಬಾಂಗ್ಲಾ ಪರ ಅತ್ಯಧಿಕ ಗಳಿಕೆ.
70 ಟೆಸ್ಟ್‌ಗಳ 134 ಇನ್ನಿಂಗ್ಸ್‌ಗಳಿಂದ 5,134 ರನ್ ಶೇಖರಿಸಿರುವ ತಮೀಮ್ 10 ಶತಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಅವರು ಟಿ–20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಎಲ್ಲ ಮೂರೂ ಮಾದರಿಗಳಲ್ಲಿ ಶತಕ ಹೊಡೆದ ಏಕೈಕ ಬಾಂಗ್ಲಾದೇಶ ಆಟಗಾರ ಎನಿಸಿದ್ದರು.
ಮಾಜಿ ನಾಯಕ ಹಬಿಬುಲ್ ಬಷರ್ ಅವರು ತಮೀಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ‘ಬಾಂಗ್ಲಾದೇಶ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು’ ಎಂದಿದ್ದಾರೆ. ‘ನಿರ್ಭೀತ ಬ್ಯಾಟಿಂಗ್‌ನಿಂದಾಗಿ ಎಂದೆಂದೂ ನೆನಪಿನಲ್ಲುಳಿಯುವಿರಿ’ ಎಂದು ಚಿತ್ರ ನಿರ್ಮಾಪಕ ಅಶ್ಫಾಖ್ ನಿಪುನ್ ಬಣ್ಣಿಸಿದ್ದಾರೆ.
ಚಿತ್ತಗಾಂಗ್‌ನಲ್ಲಿ ಜನಿಸಿದ ತಮೀಮ್ ಅವರದ್ದು ಕ್ರಿಕೆಟ್ ಕುಟುಂಬ. ಸೋದರ ಮಾವ ಅಕ್ರಮ್ ಖಾನ್, ಹಿರಿಯಣ್ಣ ನಫೀಸ್ ಇಕ್ಬಾಲ್ ಇಬ್ಬರೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದವರು.
2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಂದ್ಯದಲ್ಲಿ ಜಹೀರ್ ಖಾನ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಎತ್ತುವ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧಿಗೆ ಬಂದಿದ್ದರು. ಆ ಪಂದ್ಯದಲ್ಲಿ 53 ಎಸೆತಗಳಲ್ಲಿ ಗಳಿಸಿದ 51 ರನ್‌ಗಳಿಂದಾಗಿ ಬಾಂಗ್ಲಾದೇಶ ಅನಿರೀಕ್ಷಿತ ಜಯ ಪಡೆದಿತ್ತು.
2010ರಲ್ಲಿ ಲಾರ್ಡ್ಸ್‌ನಲ್ಲಿ ಶತಕ ಹೊಡೆದ ಬಾಂಗ್ಲಾದೇಶದ ಮೊದಲ ಆಟಗಾರ ಎನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.