ADVERTISEMENT

ಟ್ವೆಂಟಿ–20 ವಿಶ್ವಕಪ್ ಪ್ರಾಥಮಿಕ ಹಂತ: ಬಾಂಗ್ಲಾದೇಶಕ್ಕೆ ಸ್ಕಾಟ್ಲೆಂಡ್ ಸವಾಲು

ಪಿಟಿಐ
Published 16 ಅಕ್ಟೋಬರ್ 2021, 19:45 IST
Last Updated 16 ಅಕ್ಟೋಬರ್ 2021, 19:45 IST
ಮೆಹಮುದುಲ್ಲಾ ಮತ್ತು ಮುಸ್ತಫಿಜುರ್ ರೆಹಮಾನ್ 
ಮೆಹಮುದುಲ್ಲಾ ಮತ್ತು ಮುಸ್ತಫಿಜುರ್ ರೆಹಮಾನ್    

ಅಲ್ ಅಮೆರತ್, ಒಮನ್: ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೂಪರ್ 12 ರ ಸುತ್ತಿಗೆ ಪ್ರವೇಶಿಸುವ ಛಲದೊಂದಿಗೆ ಭಾನುವಾರ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.

ಇದೇ 23ರಿಂದ ಪ್ರಮುಖ ಸುತ್ತಿನ ಸ್ಪರ್ಧೆ ನಡೆಯಲಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಒಮನ್ ಮತ್ತು ಪಪುವಾ ನ್ಯೂಗಿನಿ ಸ್ಪರ್ಧಿಸುತ್ತಿವೆ. ಈ ಎಲ್ಲ ತಂಡಗಳಿಗಿಂತಲೂ ಹೆಚ್ಚು ಅನುಭವ ಮತ್ತು ಬಲಿಷ್ಠವಾಗಿರುವ ತಂಡವೆಂದರೆ ಬಾಂಗ್ಲಾದೇಶವಾಗಿದೆ. ಆದ್ದರಿಂದ ಈ ಗುಂಪಿನಿಂದ ಸೂಪರ್ 12 ಸುತ್ತಿಗೆ ಪ್ರವೇಶಿಸುವ ನೆಚ್ಚಿನ ತಂಡವೂ ಆಗಿದೆ.

ಕಳೆದೊಂದು ವರ್ಷದ ಅವಧಿಯಲ್ಲಿ ಬಾಂಗ್ಲಾ ತಂಡವು ಒಂಬತ್ತು ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಜಯಿಸಿದೆ. ಹೋದ ಮಾರ್ಚ್‌ನಲ್ಲಿ ಬಾಂಗ್ಲಾ ತಂಡವು ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಅದರ ನಂತರ ಜಿಂಬಾಬ್ವೆ (2–1), ಆಸ್ಟ್ರೇಲಿಯಾ (4–1) ಮತ್ತು ನ್ಯೂಜಿಲೆಂಡ್ (3–2) ತಂಡಗಳ ವಿರುದ್ಧ ಗೆಲುವು ಸಾಧಿಸಿತ್ತು.

ADVERTISEMENT

ಬಾಂಗ್ಲಾ ತಂಡವು ಇಲ್ಲಿ ಅರ್ಹತೆ ಗಿಟ್ಟಿಸಿದರೆ ಭಾರತ, ಅಫ್ಗಾನಿಸ್ತಾನ, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳಿರುವ ಗುಂಪನ್ನು ಪ್ರವೇಶಿಸುವುದು.

2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ತಂಡವು ಸೂಪರ್ 8ಕ್ಕೆ ಪ್ರವೇಶಿಸಿತ್ತು. ಆದರೆ, 2009, 2010 ಮತ್ತು 2012ರಲ್ಲಿ ನಿರಾಶೆ ಅನುಭವಿಸಿತ್ತು. 2016ರಲ್ಲಿ ಪುಟದೆದ್ದ ತಂಡವು ಸೂಪರ್ 10ರ ಗುಂಪಿಗೆ ಪ್ರವೇಶಿಸಿತ್ತು. ಆದರೆ, ಭಾರತದ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಸೋತು ಹೊರಿದ್ದಿತ್ತು. ನಾಯಕ ಮೆಹಮುದುಲ್ಲಾ, ಐಪಿಎಲ್ ಟೂರ್ನಿಯ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಆಡಿರುವ ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ, ಮುಸ್ತಫಿಜುರ್ ರೆಹಮಾನ್ ಅವರು ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್ ಪ್ರಾಥಮಿಕ ಹಂತಕ್ಕೆ ಪ್ರವೇಶಿಸಿರುವ ಸ್ಕಾಟ್ಲೆಂಡ್ ತಂಡದಲ್ಲಿ ನಾಯಕ ಕೈಲ್ ಕೋಜೆರ್, ಜಾರ್ಜ್ ಮುನ್ಸಿ ಉತ್ತಮ ಲಯದಲ್ಲಿದ್ದಾರೆ.

ತಂಡಗಳು: ಬಾಂಗ್ಲಾದೇಶ: ಮೆಹಮುದುಲ್ಲಾ (ನಾಯಕ), ಲಿಟನ್ ದಾಸ್, ಮೊಹಮ್ಮದ್ ನೈಮ್, ಮೆಹದಿ ಹಸನ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ಮುಷ್ಫಿಕರ್ ರಹೀಂ, ನೂರುಲ್ ಹಸನ್ (ವಿಕೆಟ್‌ಕೀಪರ್), ಅಫಿಫ್ ಹುಸೇನ್, ನಸುಮ್ ಅಹಮದ್, ತಸ್ಕಿನ್ ಅಹಮದ್, ಶಮೀಮ್ ಹೊಸೈನ್, ಮುಸ್ತಫಿಜುರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್.

ಸ್ಕಾಟ್ಲೆಂಡ್: ಕೈಲ್ ಕೋಜರ್ (ನಾಯಕ), ರಿಚರ್ಡ್ ಬ್ಯಾರಿಂಗ್ಟನ್, ಡೈಲನ್ ಬಜ್, ಮ್ಯಾಥ್ಯೂ ಕ್ರಾಸ್ (ವಿಕೆಟ್‌ಕೀಪರ್), ಜೋಶ್ ಡೇವಿ, ಅಲೈ ಇವಾನ್ಸ್, ಕ್ರಿಸ್ ಗ್ರೀವ್ಸ್, ಮೈಕೆಲ್ ಲೀಸ್ಕ್, ಕೆಲಮ್ ಮೆಕಾಲ್ಡ್, ಜಾರ್ಜ್ ಮುನ್ಸೆ, ಸಫೈನ್ ಶರೀಫ್, ಹಮ್ಜಾ ತಾಹೀರ್, ಕ್ರೇತ್ ವಾಲೆಸ್, ಮಾರ್ಕ್ ವ್ಯಾಟ್, ಬ್ರಾಡ್ ವೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.