
ಢಾಕಾ: ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನು ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು(ಬಿಸಿಬಿ) ನಿರ್ಧರಿಸಿದೆ.
‘ನಮ್ಮ ಮಂಡಳಿಯು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕಿಸಿದೆ. ಕಳೆದ 24 ಗಂಟೆಗಳಲ್ಲಿ ನಡೆದ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಸದ್ಯದ ಸನ್ನಿವೇಶದಲ್ಲಿ ಆಟಗಾರರ ಸುರಕ್ಷತೆ ಕುರಿತು ಆತಂಕವಿದೆ. ಬಾಂಗ್ಲಾ ಸರ್ಕಾರ ಮತ್ತು ಬಿಸಿಬಿ ನಿರ್ದೇಶಕರು ಚರ್ಚೆಸಿದ ನಂತರ ತಂಡವು ಭಾರತಕ್ಕೆ ಪ್ರಯಾಣಸುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ‘ ಎಂದು ಸರ್ಕಾರದ ಸಲಹೆಗಾರ ಆಸಿಫ್ ನಜ್ರುಲ್ ಅವರು ಫೇಸ್‌ಬುಕ್‌ನಲ್ಲಿ ಹಾಕಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾ ತಂಡವು ಭಾರತದ ತಾಣಗಳಲ್ಲಿ ನಾಲ್ಕು ಲೀಗ್ ಪಂದ್ಯಗಳನ್ನು ಆಡಲಿದೆ. ಪ್ರಸ್ತುತ ಆ ಎಲ್ಲ ಪಂದ್ಯಗಳನ್ನೂ ಶ್ರೀಲಂಕೆಗೆ ಸ್ಥಳಾಂತರಿಸಲು ಬಿಸಿಬಿಯು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಮನವಿ ಮಾಡಿದೆ. ಪಾಕಿಸ್ತಾನ ತಂಡದ ಪಂದ್ಯಗಳನ್ನು ಲಂಕಾದಲ್ಲಿ ನಡೆಸಲಾಗುತ್ತಿದೆ.
ಬಿಸಿಸಿಐ ನಿರ್ದೆಶನದ ಬಳಿಕ ಬಾಂಗ್ಲಾ ಕ್ರಿಕೆಟ್ ಆಟಗಾರ, ವೇಗಿ ಮುಸ್ತಫಿಝರ್ ರೆಹಮಾನ್ ಅವರನ್ನು ಐಪಿಎಲ್‌ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಕೈಬಿಟ್ಟಿರುವುದಾಗಿ ಫ್ರಾಂಚೈಸಿ ಘೋಷಿಸಿದ ಬಳಿಕ ಈ ಬೆಳವಣಿಗೆ ಆಗಿದೆ.
ಮುಸ್ತಫಿಝರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಬಿಸಿಸಿಐ ನಿರ್ದೇಶಿಸಿದೆ ಎಂದು ಕೆಕೆಆರ್ ಪ್ರಕಟಣೆಯಲ್ಲಿ ತಿಳಿಸಿತ್ತು.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ ತೀವ್ರಗೊಂಡಿರುವ ಬೆನ್ನಲ್ಲೇ ಬಾಂಗ್ಲಾದ ಆಟಗಾರನನ್ನು ಕೈಬಿಡುವಂತೆ ಒತ್ತಡ ಹೆಚ್ಚಾದ ಹಿನ್ನೆಲೆ ಬಿಸಿಸಿಐ, ಕೆಕೆಆರ್‌ಗೆ ನಿರ್ದೇಶನ ನೀಡಿತು. ಅಲ್ಲದೆ, ಯಾವುದೇ ಪರ್ಯಾಯ ಆಯ್ಕೆಯನ್ನು ಅನುಮೋದಿಸುವುದಾಗಿಯೂ ಭರವಸೆ ನೀಡಿದೆ ಎಂಬುದಾಗಿ ದೇವಜಿತ್ ಸೈಕಿಯಾ ಎಎನ್‌ಐಗೆ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೆಕೆಆರ್ ತಂಡ ₹9.20 ಕೋಟಿಗೆ ಮುಸ್ತಫಿಝರ್ ಅವರನ್ನು ಖರೀದಿಸಿತ್ತು.
ಫೆಬ್ರುವರಿ 7ರಂದು ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡಸ್ ವಿರುದ್ಧದ ಪಂದ್ಯದ ಮೂಲಕ ಬಾಂಗ್ಲಾದೇಶ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಬಳಿಕ, ಫೆ 9ರಂದು ಇಟಲಿಯನ್ನು ಎದುರಿಸಲಿದೆ.
ತಂಡ ಪ್ರಕಟ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಾಂಗ್ಲಾ ತಂಡವನ್ನು ಬಿಸಿಬಿಯು ಪ್ರಕಟಿಸಿದೆ. 15 ಆಟಗಾರರ ತಂಡವನ್ನು ಲಿಟನ್ ದಾಸ್ ಮುನ್ನಡೆಸಲಿದ್ದಾರೆ. ಮೊಹಮ್ಮದ್ ಸೈಫ್ ಹಸನ್ ಉಪನಾಯಕರಾಗಿದ್ದಾರೆ. ಮುಸ್ತಫಿಝುರ್ ರೆಹಮಾನ್ ಕೂಡ ತಂಡದಲ್ಲಿದ್ದಾರೆ.
ಉಳಿದಂತೆ; ತಂಝೀದ್ ಹಸನ್, ಮೊಹಮ್ಮದ್ ಪರ್ವೇಜ್ ಹುಸೇನ್ ಎಮೊನ್, ತೌಹಿದ್ ಹೃದಯ್, ಶಮೀಮ್ ಹುಸೇನ್, ಖಾಜಿ ನೂರುಲ್ ಹಸನ್ ಸೊಹನ್, ಶಾಖ್ ಮೆಹದಿ ಹಸನ್, ನಸೂಮ್ ಅಹಮದ್, ತಂಝೀಮ್ ಹಸನ್ ಸಕೀಬ್, ತಸ್ಕೀನ್ ಅಹಮದ್, ಮೊಹಮ್ಮದ್ ಶೈಫೂದ್ದೀನ್, ಶೋರಿಫುಲ್ ಇಸ್ಲಾಮ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.