ADVERTISEMENT

ಭಾರತ ಕ್ರಿಕೆಟ್ ತಂಡದ ಟೈಟಲ್ ಪ್ರಾಯೋಜಕರಿಗಾಗಿ ಬಿಡ್ ಆಹ್ವಾನಿಸಿದ ಬಿಸಿಸಿಐ

ಆನ್‌ಲೈನ್ ಗೇಮಿಂಗ್, ಕ್ರಿಪ್ಟೋಕರೆನ್ಸಿ ಕಂಪೆನಿಗಳಿಗೆ ಬಿಡ್‌ ಪ್ರಕ್ರಿಯೆಯಿಂದ ನಿರ್ಬಂಧ

ಪಿಟಿಐ
Published 2 ಸೆಪ್ಟೆಂಬರ್ 2025, 14:30 IST
Last Updated 2 ಸೆಪ್ಟೆಂಬರ್ 2025, 14:30 IST
-
-   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಟೈಟಲ್‌ ಪ್ರಾಯೋಜಕರಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಬಿಡ್‌ ಆಹ್ವಾನಿಸಿದೆ. ಹಣದ ಜೂಜಾಟಗಳು ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹರಿಸುವ ಕಂಪೆನಿಗಳನ್ನು ಬಿಡ್‌ನಲ್ಲಿ ಭಾಗವಹಿಸದಂತೆ  ನಿರ್ಬಂಧಿಸಲಾಗಿದೆ. 

ಕೇಂದ್ರ ಸರ್ಕಾರವು ಈಚೆಗೆ  ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರಿಂದಾಗಿ ಈ ಮೊದಲು ಭಾರತ ತಂಡದ ಟೈಟಲ್ ಪ್ರಾಯೋಜಕರಾಗಿದ್ದ ಡ್ರಿಮ್ ಇಲೆವನ್‌ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿದೆ. ಆದ್ದರಿಂದ ಈಗ ಹೊಸ ಪ್ರಾಯೋಜಕರನ್ನು ಆಹ್ವಾನಿಸುತ್ತಿದೆ. ಡ್ರೀಮ್‌ ಇಲೆವನ್ ಮತ್ತು ಮೈ ಇಲೆವನ್ ಸರ್ಕಲ್ ಗೇಮಿಂಗ್‌ ಆ್ಯಪ್‌ಗಳ ಪ್ರಾಯೋಜಕತ್ವದಿಂದ ಬಿಸಿಸಿಐಗೆ ಸುಮಾರು ಒಂದು ಕೋಟಿ ರೂಪಾಯಿ ಆದಾಯವಿತ್ತು.  

ಪ್ರಸ್ತುತ ಬಿಡ್ ಹಾಕುವ ಸಂಸ್ಥೆಗಳಿಗೂ ಬಿಸಿಸಿಐ ಕೆಲವು ನಿಬಂಧನೆಗಳನ್ನು ಹಾಕಿದೆ;

ADVERTISEMENT

‘ಬಿಡ್ ಸಲ್ಲಿಸುವ ಸಂಸ್ಥೆಗಳು ಅಥವಾ ಸಮೂಹ ಸಂಸ್ಥೆಗಳು; ಭಾರತದೊಳಗೆ ಅಥವಾ ವಿಶ್ವದ ಯಾವುದೇ ಭಾಗದಲ್ಲಿಯೂ ಮನಿ ಗೇಮಿಂಗ್, ಬೆಟ್ಟಿಂಗ್,  ಜೂಜಾಟ  ಅಥವಾ ಅಂತಹದೇ ಸೇವೆಗಳಲ್ಲಿ ತೊಡಗಿಕೊಂಡಿರಬಾರದು. ಅಂತಹ ಸೇವೆಗಳನ್ನು ಭಾರತದಲ್ಲಿ ಯಾವುದೇ ವ್ಯಕ್ತಿಗೂ  ಒದಗಿಸಿರಬಾರದು, ಭಾರತದಲ್ಲಿ ಬೆಟ್ಟಿಂಗ್ ಅಥವಾ ಜೂಜಾಟಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಲ್ಲಿ ಹೂಡಿಕೆ ಮಾಡಿರಬಾರದು ಅಥವಾ ಅಂತಹ ವ್ಯಕ್ತಿಗಳು ಮಾಲೀಕತ್ವದ ಭಾಗವಾಗಿರಬಾರದು’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. 

'ಆಸಕ್ತಿ ಅಭಿವೃಕ್ತಿ ಅರ್ಜಿ’ (ಐಇಒಐ) ನಮೂನೆ ಖರೀದಿಸಲು ಸೆ.12 ಕೊನೆಯ ದಿನವಾಗಿದೆ. ಬಿಡ್ ದಾಖಲೆಗಳನ್ನು ಸೆ. 16ರೊಳಗೆ ಸಲ್ಲಿಸಬೇಕು.  

‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಅನ್ವಯ ಜೂಜಾಟ, ಬೆಟ್ಟಿಂಗ್‌ ಪ್ರಚಾರ, ವ್ಯವಹಾರಗಳಲ್ಲಿ ತೊಡಗಿರುವ ಕಂಪೆನಿಗಳಿಗೆ ಬಿಡ್ ಸಲ್ಲಿಸುವಂತಿಲ್ಲ. ಅಷ್ಟೇ ಅಲ್ಲ; ತಂಬಾಕು, ಮದ್ಯ, ಅಶ್ಲೀಲತೆ ಮತ್ತು  ಸಾರ್ವಜನಿಕರ ನೈತಿಕತೆಗೆ ಧಕ್ಕೆ ತರುವ ಯಾವುದೇ ರೀತಿಯ ಸಂಸ್ಥೆಗಳಿಗೂ ನಿರ್ಬಂಧ ಹಾಕಲಾಗಿದೆ’ ಎಂದೂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

‘ಪ್ರಸ್ತುತ ಬಿಸಿಸಿಐನೊಂದಿಗೆ ಒಪ್ಪಂದದಲ್ಲಿರುವ ಸಹಪ್ರಾಯೋಜಕ ಸಂಸ್ಥೆಗಳೂ ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ’ ಎಂದೂ ತಿಳಿಸಲಾಗಿದೆ. 

ಪ್ರಸ್ತುತ ಆಡಿದಾಸ್, ಕ್ಯಾಂಪಾ ಕೋಲಾ, ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ಮತ್ತು ಎಸ್‌ಬಿಐ ಲೈಫ್ ಸಂಸ್ಥೆಗಳಿವೆ. ಅಲ್ಲದೇ ಇನ್ನೂ ಕೆಲವು ಕ್ರೀಡಾ ಪೋಷಾಕು ಸಂಸ್ಥೆಗಳು, ಬ್ಯಾಂಕ್‌ಗಳು, ಹಣಕಾಸು ಸೇವಾ ಮತ್ತು ನಾನ್‌ ಬ್ಯಾಂಕಿಂಗ್ ಕಂಪೆನಿಸ್, ಆಲ್ಕೋಹಾಲ್ ರಹಿತ ತಂಪು ಪಾನೀಯಗಳು, ಫ್ಯಾನ್ಸ್‌, ಮಿಕ್ಸರ್ ಗ್ರೈಂಡರ್ಸ್, ಸೇಫ್ಟಿ ಲಾಕ್ಸ್‌ ಮತ್ತು ವಿಮಾ ಸಂಸ್ಥೆಗಳೂ ಇವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.