ADVERTISEMENT

ಐಪಿಎಲ್: ಬಿಸಿಸಿಐ ಪ್ರತಿನಿಧಿಗೆ ಕೋವಿಡ್

ಪಿಟಿಐ
Published 3 ಸೆಪ್ಟೆಂಬರ್ 2020, 14:31 IST
Last Updated 3 ಸೆಪ್ಟೆಂಬರ್ 2020, 14:31 IST
ಬಿಸಿಸಿಐ
ಬಿಸಿಸಿಐ   

ದುಬೈ: ಯುಎಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಉಸ್ತುವಾರಿಗಾಗಿ ತೆರಳಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಯೋಗದ ಸದಸ್ಯರೊಬ್ಬರಿಗೆ ಕೋವಿಡ್–19 ಸೋಂಕು ಖಚಿತವಾಗಿದೆ.

‘ಬಿಸಿಸಿಐ ನಿಯೋಗದಲ್ಲಿರುವ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ಆದರೆ ಅವರು ಕ್ರಿಕೆಟ್ ಚಟುವಟಿಕೆಗಳ ತಂಡ ಅಥವಾ ವೈದ್ಯಕೀಯ ಬಳಗದ ಸದಸ್ಯರೋ ಎಂಬುದು ಸ್ಪಷ್ಟವಾಗಿಲ್ಲ. ಅವರನ್ನು ಬಿಟ್ಟರೆ ಉಳಿದೆಲ್ಲ ಸದಸ್ಯರೂ ಆರೋಗ್ಯವಾಗಿದ್ದಾರೆ’ ಎಂದು ಐಪಿಎಲ್ ಆಡಳಿತ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೊಂದು ಮೂಲದ ಪ್ರಕಾರ, ಕೋವಿಡ್ ದೃಢಪಟ್ಟಿರುವ ವ್ಯಕ್ತಿಯು ಭಾರತ ಕ್ರಿಕೆಟ್ ತಂಡದ ನೆರವು ಸಿಬ್ಬಂದಿಯಾಗಿದ್ದಾರೆ. ಐಪಿಎಲ್‌ನಲ್ಲಿ ಆಡುತ್ತಿರುವ ಬಿಸಿಸಿಐ ಕೇಂದ್ರಿಯ ಗುತ್ತಿಗೆಯಲ್ಲಿರುವ ಆಟಗಾರರ ಬಗ್ಗೆ ನಿಗಾವಹಿಸಲು ಬಂದಿರುವ ಅಧಿಕಾರಿಯಾಗಿದ್ದಾರೆ.

ADVERTISEMENT

ಈಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರೂ ಸೇರಿದಂತೆ 13 ಮಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅವರೆಲ್ಲರನ್ನೂ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರೆಲ್ಲರಿಗೂ ಲಕ್ಷಣರಹಿತ ಸೋಂಕು ಇತ್ತೆನ್ನಲಾಗಿದೆ.

ಉಳಿದೆಲ್ಲ ತಂಡಗಳೂ ಅಭ್ಯಾಸ ಆರಂಭಿಸಿವೆ. ಟೀಮ್ ಬಾಂಡಿಂಗ್ ಚಟುವಟಿಕೆಗಳು ಆರಂಭವಾಗಿವೆ.

ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಟೂರ್ನಿ ನಡೆಯಲಿದೆ. ದುಬೈ, ಶಾರ್ಜಾ ಮತ್ತು ಅಬುದಾಭಿಯಲ್ಲಿ ಪಂದ್ಯಗಳು ನಡೆಯಲಿವೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.