ADVERTISEMENT

ಮತ್ತೆ ಕೋವಿಡ್ ಅಲೆ; ಎಲ್ಲ ವಯೋಮಾನದ ಟೂರ್ನಿ ಸ್ಥಗಿತಗೊಳಿಸಿದ ಬಿಸಿಸಿಐ

ಏಜೆನ್ಸೀಸ್
Published 17 ಮಾರ್ಚ್ 2021, 4:07 IST
Last Updated 17 ಮಾರ್ಚ್ 2021, 4:07 IST
ಬಿಸಿಸಿಐ
ಬಿಸಿಸಿಐ   

ಮುಂಬೈ: ದೇಶದಲ್ಲಿ ಮತ್ತೆ ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ವಿನೂ ಮಂಕಡ್ ಟ್ರೋಫಿ ಸೇರಿದಂತೆ ಎಲ್ಲ ವಯೋಮಾನದ ದೇಶೀಯಕ್ರಿಕೆಟ್ ಟೂರ್ನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆಯೋಜನೆಯ ಬಳಿಕ ಪರಿಸ್ಥಿತಿ ಅವಲೋಕಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬರೆದ ಪತ್ರದಲ್ಲಿ, ಈ ಬಗ್ಗೆ ವಿವರಣೆ ನೀಡಲಾಗಿದೆ.

ADVERTISEMENT

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಾಮಾನ್ಯ ಪರಿಸ್ಥಿತಿಗೂ ವಿರುದ್ಧವಾಗಿ 2020-21ನೇ ಸಾಲಿನ ದೇಶೀಯ ಕ್ರಿಕೆಟ್ ಟೂರ್ನಿಯು ವಿಳಂಬವಾಗಿ ಜನವರಿಯಲ್ಲಿ ಆರಂಭವಾಗಿತ್ತು. ಬಳಿಕ ಐಪಿಎಲ್ ಹರಾಜಿಗೂ ಮೊದಲು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಯೋಜಿಸಲಾಗಿತ್ತು.

ವಿಜಯ್ ಹಜಾರೆ ದೇಶೀಯ ಟಿ20 ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಟೂರ್ನಿ ಮಾರ್ಚ್ 14ರಂದು ಮುಕ್ತಾಯಗೊಂಡಿತ್ತು.

ಸೀನಿಯರ್ ಮಹಿಳೆಯರ ಏಕದಿನ ಟೂರ್ನಿ ವಿವಿಧ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಏಪ್ರಿಲ್ 4ರಂದು ಫೈನಲ್ ನಿಗದಿಯಾಗಿದೆ. ಈ ಋತುವಿನಲ್ಲಿ ವಿವಿಧ ವಯೋಮಾನದವರಲ್ಲಿ ಪ್ರಾಯೋಗಿಕವಾಗಿ ಸಾಧ್ಯವಾದಷ್ಟು ಪಂದ್ಯಗಳನ್ನು ಆಯೋಜಿಸುವುದು ನಮ್ಮ ಪ್ರಯತ್ನವಾಗಿದ್ದರೂ, ಈಗಿನ ಪರಿಸ್ಥಿತಿಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡುಎಲ್ಲ ವಯೋಮಾನದ ದೇಶೀಯ ಟೂರ್ನಿಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ಜಯ್ ಶಾ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಂದ್ಯಾವಳಿಗಳನ್ನು ಆಯೋಜಿಸಲು ಇಂಟರ್‌-ಸಿಟಿ ಪ್ರಯಾಣ ಅಗತ್ಯವಾಗಿದ್ದು, ಕಠಿಣ ಕ್ವಾರಂಟೈನ್ ಮಾನದಂಡ ಮತ್ತು ಬಯೋ ಬಬಲ್ ವ್ಯವಸ್ಥೆಯ ಪಾಲನೆಯ ಅಗತ್ಯವಿರುತ್ತದೆ.

ವಿವಿಧ ಬೋರ್ಡ್ ಪರೀಕ್ಷೆಗಳು ಆರಂಭವಾಗಲಿರುವುದರಿಂದ ಐಪಿಎಲ್ ಮುಗಿದ ಬಳಿಕ ಪಂದ್ಯಾವಳಿಗಳನ್ನು ಆಯೋಜಿಸುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ನಮ್ಮ ಆಟಗಾರರ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷಮಕ್ಕೆ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಅಂದ ಹಾಗೆ ಐಪಿಎಲ್ ಟೂರ್ನಿಯು ಏಪ್ರಿಲ್ 9ರಿಂದ ಆರಂಭವಾಗಿ ಮೇ 30ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.