ADVERTISEMENT

ಟೆಸ್ಟ್ ಸರಣಿ ವೇಳಾಪಟ್ಟಿ ಬದಲಿಸಲು ಬಿಸಿಸಿಐ ಕೇಳಿಲ್ಲ: ಇಸಿಬಿ

ಪಿಟಿಐ
Published 21 ಮೇ 2021, 12:27 IST
Last Updated 21 ಮೇ 2021, 12:27 IST
ಬಿಸಿಸಿಐ ಲೋಗೊ
ಬಿಸಿಸಿಐ ಲೋಗೊ   

ನವದೆಹಲಿ: ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯನ್ನು ಪೂರ್ಣಗೊಳಿಸಲು, ಟೆಸ್ಟ್ ಸರಣಿಯ ವೇಳಾಪಟ್ಟಿ ಬದಲಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮನವಿ ಮಾಡಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ ಶುಕ್ರವಾರ ಹೇಳಿದೆ.

ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಆಡಬೇಕಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯವು ಆಗಸ್ಟ್ 4ರಿಂದ ನಿಗದಿಯಾಗಿದೆ. ಇದನ್ನು ಒಂದು ವಾರ ಮೊದಲೇ ಆರಂಭಿಸಿದರೆ, ಐಪಿಎಲ್‌ನ ಉಳಿದ 31 ಪಂದ್ಯಗಳನ್ನು ನಡೆಸಲು ಅವಕಾಶ ಸಿಗಬಹುದು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿ ಸಲ್ಲಿಸಿದ್ದಾಗಿ ಬ್ರಿಟಿಷ್ ಮಾಧ್ಯಮ ವರದಿ ಮಾಡಿತ್ತು.

‘ನಾವು ಈ ಕುರಿತು ಬಿಸಿಸಿಐನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅದರಲ್ಲೂ ವಿಶೇಷವಾಗಿ ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದ್ದೇವೆ. ಆದರೆ ಐದು ಪಂದ್ಯಗಳ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಬದಲಿಸಲು ಬಿಸಿಸಿಐ ಅಧಿಕೃತವಾಗಿ ಕೇಳಿಕೊಂಡಿಲ್ಲ. ಹಾಗಾಗಿ ನಿಗದಿಯಂತೆ ಪಂದ್ಯಗಳು ನಡೆಯಲಿವೆ‘ ಎಂದು ಇಸಿಬಿ ವಕ್ತಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

2021ರ ಐಪಿಎಲ್ ಆವೃತ್ತಿಯ ಪೂರ್ಣಗೊಳ್ಳದಿದ್ದರೆ ಬಿಸಿಸಿಐಗೆ ₹ 2500 ಕೋಟಿ ಆದಾಯ ನಷ್ಟವಾಗಲಿದೆ. ಬಯೋಬಬಲ್‌ನಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಬಾರಿಯ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿದೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಹೆಸರಾಂತ ಕ್ರಿಕೆಟಿಗ ಮೈಕೆಲ್ ಅಥರ್ಟನ್‌ ಅವರು ಸುದ್ದಿಸಂಸ್ಥೆಯೊಂದಕ್ಕೆ ಬರೆದ ಅಂಕಣದಲ್ಲಿ ವೇಳಾಪಟ್ಟಿಯ ಬದಲಾವಣೆಗೆ ಬಿಸಿಸಿಐ ಮನವಿ ಮಾಡಿಕೊಂಡಿದ್ದಾಗಿ ಉಲ್ಲೇಖಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು ‘ಮಂಡಳಿಯು ಐಪಿಎಲ್ ಆಯೋಜಿಸುವ ಆಯ್ಕೆಗಳ ಹುಡುಕಾಟದಲ್ಲಿದೆ. ಆದರೆ ಈ ಬಗ್ಗೆ ಇಸಿಬಿಯನ್ನು ಅಧಿಕೃತವಾಗಿ ಸಂಪರ್ಕಿಸಿಲ್ಲ‘ ಎಂದಿದ್ದಾರೆ.

ಒಂದು ವೇಳೆ ಬಿಸಿಸಿಐ ಔಪಚಾರಿಕವಾಗಿ ಮನವಿ ಸಲ್ಲಿಸಿದರೆ, ಇಸಿಬಿಯು ತನ್ನ ಮಹತ್ವಾಕಾಂಕ್ಷೆಯ ‘ದಿ ಹಂಡ್ರೆಡ್‌‘ ಹಾಗೂ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಜುಲೈ 8ರಿಂದ 20ರವರೆಗೆ ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳನ್ನು ಆಡಬೇಕಿದೆ. ದಿ ಹಂಡ್ರೆಡ್‌ ಟೂರ್ನಿಯು ಜುಲೈ 23ರಿಂದ ಆಗಸ್ಟ್ 22ರವರೆಗೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.