ADVERTISEMENT

ಟ್ವೆಂಟಿ–20 ವಿಶ್ವಕಪ್: ಭವಿಷ್ಯ ನಿರ್ಧಾರಕ್ಕೆ ಕಾಯುತ್ತಿರುವ ಬಿಸಿಸಿಐ

ಪಿಟಿಐ
Published 19 ಜುಲೈ 2020, 13:45 IST
Last Updated 19 ಜುಲೈ 2020, 13:45 IST
ಐಸಿಸಿ
ಐಸಿಸಿ   

ದುಬೈ: ಈ ಬಾರಿಯ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಬಗ್ಗೆ ಜುಲೈ 20ರಂದು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಟೂರ್ನಿ ರದ್ದಾದರೆ ಆ ಸಂದರ್ಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಕಾಯುತ್ತಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಯ ನಿರ್ಧಾರಕ್ಕಾಗಿ ಕಾತರದಿಂದ ಕಾಯುತ್ತಿದೆ.

ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 18ರಿಂದ ನವೆಂಬರ್‌ 15ರ ವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಟೂರ್ನಿಯನ್ನು ಸಂಘಟಿಸುವುದು ಕಷ್ಟಸಾಧ್ಯ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಮೇ ತಿಂಗಳಲ್ಲಿ ತಿಳಿಸಿತ್ತು. ಭಾರತದಲ್ಲೂ ಕೊರೊನಾ ಹಾವಳಿ ತೀವ್ರವಾಗಿದೆ. ಆದ್ದರಿಂದ ಐಪಿಎಲ್ ಆಯೋಜಿಸಿದರೂ ಪಂದ್ಯಗಳನ್ನು ಯುಎಇಯಲ್ಲಿ ನಡೆಸುವ ಸಾಧ್ಯತೆಗಳೇ ಹೆಚ್ಚು.

’ಏಷ್ಯಾಕಪ್ ಮುಂದೂಡುವುದಕ್ಕಾಗಿ ಕಾಯುತ್ತಿದ್ದೆವು. ಟೂರ್ನಿಯನ್ನು ಮುಂದೂಡಲಾಗಿದೆ. ಈಗ, ವಿಶ್ವಕಪ್ ಟೂರ್ನಿಯನ್ನು ಮುಂದೂಡಿದರೆ ಅಥವಾ ರದ್ದು ಮಾಡಿದರೆ ಮಾತ್ರ ಐಪಿಎಲ್ ಬಗ್ಗೆ ಯೋಚಿಸಬಹುದಾಗಿದೆ. ಆಸ್ಟ್ರೇಲಿಯಾದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ ಎಂದು ಹೇಳಿದ ನಂತರವೂ ಐಸಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿಲ್ಲ‘ ಎಂದು ಬಿಸಿಸಿಐ ಅಪೆಕ್ಸ್ ಸಮಿತಿಯ ಸದಸ್ಯರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ADVERTISEMENT

ಸಭೆಯಲ್ಲಿ ಮುಂದಿನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯ ಕುರಿತು ಕೂಡ ಚರ್ಚೆ ನಡೆಯಲಿದೆ. ಶಶಾಂಕ್ ಮನೋಹರ್ ಈಚೆಗೆ ರಾಜೀನಾಮೆ ನೀಡಿದ್ದರಿಂದ ಮುಖ್ಯಸ್ಥರ ಸ್ಥಾನ ಖಾಲಿ ಉಳಿದಿದೆ. ಹುದ್ದೆಗೆಒಂದಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳಾಗಿದ್ದರೆ ಯಾವ ನೀತಿಯನ್ನು ಅನುಸರಿಸಬೇಕು ಎಂಬುದರ ಬಗ್ಗೆ ಇನ್ನೂ ಸೂಕ್ತ ನಿರ್ಧಾರ ಹೊರಬಿದ್ದಿಲ್ಲ. ಮುಖ್ಯಸ್ಥರ ಸ್ಥಾನಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೆಸರು ಮುನ್ನೆಲೆಯಲ್ಲಿದ್ದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಕಾಲಿನ್ ಗ್ರೇವ್ಸ್ ಅವರು ಕೂಡ ಸ್ಪರ್ಧೆಗೆ ಇಳಿಯುವ ಸಾಧ್ಯತೆಗಳು ಇವೆ.

ನ್ಯೂಜಿಲೆಂಡ್‌ನ ಗ್ರೆಗರ್ ಬಾರ್ಕ್ಲೆ ಮತ್ತು ಹಂಗಾಮಿ ಮುಖ್ಯಸ್ಥ ಹಾಂಕಾಂಗ್‌ನ ಇಮ್ರಾನ್ ಖ್ವಾಜಾ ಅವರೂ ಐಸಿಸಿ ಮುಖ್ಯಸ್ಥರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಐಸಿಸಿ ಮುಖ್ಯಸ್ಥರ ಸ್ಥಾನದಲ್ಲಿ ಕೂರಲು ಆಸಕ್ತಿ ಇದೆಯೇ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೇಳಿದಾಗ ’ನಾನಿನ್ನೂ ಯುವಕ. ಆ ಹುದ್ದೆಗೇರಲು ಯಾವುದೇ ಆತುರ ಇಲ್ಲ‘ ಎಂದು 48 ವರ್ಷದ ಗಂಗೂಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.