ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ ಗಂಗೂಲಿ ಬಗ್ಗೆ ಕೋಚ್ ರವಿಶಾಸ್ತ್ರಿ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 13:02 IST
Last Updated 26 ಅಕ್ಟೋಬರ್ 2019, 13:02 IST
   

ನವದೆಹಲಿ:ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ(ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆಮಾಜಿ ನಾಯಕ ಸೌರವ್‌ ಗಂಗೂಲಿ ನೇಮಕವಾಗಿರುವ ಬಗ್ಗೆ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.ಗಂಗೂಲಿ ನೇಮಕವು ಭಾರತ ಕ್ರಿಕೆಟ್‌ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂಬುದರ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌರವ್‌ ಗಂಗೂಲಿ ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು.ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಿರುವುದು ಭಾರತೀಯ ಕ್ರಿಕೆಟ್‌ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂಬುದರ ಸಂಕೇತವಾಗಿದೆ. ಗಂಗೂಲಿಯವರನ್ನು ಇಷ್ಟ ಪಡುವ ಹಲವರು ಭಾರತ ಕ್ರಿಕೆಟ್‌ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿಅವರು ಕಾರ್ಯ ನಿರ್ವಹಿಸಬೇಕು ಎಂದು ನಾಲ್ಕೈದು ವರ್ಷಗಳ ಹಿಂದೆಯೇ ಸಲಹೆ ನೀಡಿದ್ದರು. ಅವರ ನೇಮಕವು ಭಾರತ ಕ್ರಿಕೆಟ್‌ನ ಗೆಲುವು’ ಎಂದಿದ್ದಾರೆ.

‘ಭಾರತ ಕ್ರಿಕೆಟ್‌ ಮಂಡಳಿಯನ್ನು ಯಶಸ್ಸಿನ ಹಾದಿಗೆ ಮರಳಿಸುವ ನಿಟ್ಟಿನಲ್ಲಿ ಸುಧಾರಣೆಯಾಗಬೇಕಾದ ಕೆಲಸಗಳು ಸಾಕಷ್ಟಿವೆ.ಅವರಿಗೆ ಶುಭವಾಗಲಿ’ ಎಂದೂ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಸಿಸಿಐಗೆ ನೀಡಬೇಕಿರುವ ಬಾಕಿ ಹಣವನ್ನು ಪಡೆಯುವ ನಿಟ್ಟಿನಲ್ಲಿ ಗಂಗೂಲಿ ಹೊಂದಿರುವ ದೃಷ್ಟಿಕೋನವನ್ನು ರವಿಶಾಸ್ತ್ರಿ ಬೆಂಬಲಿಸಿದ್ದಾರೆ. ಐಸಿಸಿ ಬಿಸಿಸಿಐಗೆ ಪಾವತಿಸಬೇಕಿರುವ (₹2,635 ಕೋಟಿ) ಹಣವನ್ನು ಮುಂದಿನ ಐದು ವರ್ಷಗಳಲ್ಲಿ ನಿಯಮಿತವಾಗಿ ನೀಡಬೇಕುಎಂದು ಗಂಗೂಲಿ ಹೇಳಿದ್ದರು.

‘ನೀವು ಒಂದು ಟೇಬಲ್‌ನಿಂದ ಏನನ್ನಾದರೂ ತೆಗೆದುಕೊಂಡು ಹೋಗಬೇಕೆಂದಿದ್ದರೆ, ಟೇಬಲ್‌ಗೆ ಒಂದಿಷ್ಟನ್ನು ತಂದಿರಬೇಕು. ಅದರಲ್ಲಿ ಭಾರತದ ಕೊಡುಗೆ ಎಷ್ಟು ಎಂಬುದನ್ನು ನಾವು ಬಲ್ಲೆವು. ಆದರೆ, ನಮ್ಮನ್ನು ನಾವು ಕೇಳಿಕೊಳ್ಳಬೇಕಿರುವಪ್ರಶ್ನೆ ಏನೆಂದರೆ? ಭಾರತ ಆ ಟೇಬಲ್ಲಿಗೆ ತಂದದ್ದರಲ್ಲಿ ತನ್ನ ಪಾಲನ್ನು ನಿಜವಾಗಿಯೂ ವಾಪಸ್‌ ಪಡೆದಿದೆಯೇ?’ ಎಂದು ಶಾಸ್ತ್ರಿ ಪ್ರಶ್ನಿಸಿದ್ದಾರೆ. ಮುಂದುವರಿದು, ‘ನಮ್ಮ ಆಡಳಿತ ಮಂಡಳಿಯಲ್ಲಿ ಸಮರ್ಥರಿದ್ದಾರೆ ಎಂಬ ವಿಶ್ವಾಸ ನನಗಿದೆ. ಮುಂದೆ ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಮಾತನಾಡಿದ್ದಾರೆ.

ಭಾರತೀಯ ಕ್ರಿಕೆಟ್‌ ಒಂದು ಅತ್ಯುತ್ತಮ ಜೋಡಿಯನ್ನು ಬಯಸಿತ್ತು. ಇದೀಗ ಬಿಸಿಸಿಐ ಅಧ್ಯಕ್ಷರಾಗಿ ಸೌರವ್‌ ಗಂಗೂಲಿ ಹಾಗೂ ಎನ್‌ಸಿಎಯಲ್ಲಿ ರಾಹುಲ್‌ ದ್ರಾವಿಡ್‌ ಇದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.