ADVERTISEMENT

ಮುಂಬೈ, ದೆಹಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಟಾಕಿ ನಿಷೇಧ: BCCI ಕಾರ್ಯದರ್ಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2023, 4:33 IST
Last Updated 3 ನವೆಂಬರ್ 2023, 4:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಮುಂಬೈ ಮತ್ತು ದೆಹಲಿ ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ ) ಕಾರ್ಯದರ್ಶಿ ಜಯ್ ಶಾ ಬುಧವಾರ(ನ.2) ಘೋಷಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಭಾರತ ಏಕದಿನ ವಿಶ್ವಕಪ್ 2023ರ 33ನೇ ಪಂದ್ಯಕ್ಕೂ ಮೊದಲು ಈ ಆದೇಶ ನೀಡಿದ್ದಾರೆ.

'ನಾನು ಈ ವಿಷಯವನ್ನು ಔಪಚಾರಿಕವಾಗಿ ಐಸಿಸಿಗೆ ತಿಳಿಸಿದ್ದೇನೆ. ಮುಂಬೈ ಮತ್ತು ದೆಹಲಿ ಸ್ಟೇಡಿಯಂಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ. ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಬಿಸಿಸಿಐ ಪರಿಸರ ಕಾಳಜಿಗೆ ಬದ್ಧವಾಗಿದೆ. ಜನರ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ' ಎಂದು ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಜಯ್ ಶಾ ನಿರ್ಧಾರ ಶ್ಲಾಘಿಸಿದ ಅಮಿತಾಬ್ ಬಚ್ಚನ್:

ಐಸಿಸಿ ವಿಶ್ವಕಪ್ 2023ರ ಪಂದ್ಯಗಳ ವೇಳೆ ಮುಂಬೈ ಮತ್ತು ದೆಹಲಿ ಕ್ರೀಡಾಂಗಣದಲ್ಲಿ ಪಟಾಕಿ ಬಳಕೆ ನಿಷೇಧಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ನಿರ್ಧಾರವನ್ನು ಅಮಿತಾಬ್ ಬಚ್ಚನ್ ಶ್ಲಾಘಿಸಿದ್ದಾರೆ.

ಈ ನಿರ್ಣಯ 'ಅತ್ಯಂತ ವಿಶ್ವಾಸಾರ್ಹ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ತಮ್ಮ ಪೋಸ್ಟ್‌ನಲ್ಲಿ ಸುದ್ದಿ ಲೇಖನ ಮತ್ತು ಕ್ರೀಡಾಂಗಣದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ದೆಹಲಿ ವಾಯು ಗುಣಮಟ್ಟ ಕಳಪೆ:

ದೆಹಲಿಯ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ನ.2ರ ಸಂಜೆ 4ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 392ರಲ್ಲಿ ದಾಖಲಾಗಿದೆ ಎಂದು ಸಿಎಕ್ಯೂಎಂ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.

ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) 3ನೇ ಹಂತದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ)ಯನ್ನು ಜಾರಿಗೊಳಿಸಿದೆ. ಇದರ ಅಡಿ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯವನ್ನು ನಿಷೇಧಿಸಲಾಗಿದೆ.

ಪ್ರಾಥಮಿಕ ಶಾಲೆಗಳಿಗೆ 2 ದಿನ ರಜೆ:

ದೆಹಲಿ ವಾಯುಮಾಲಿನ್ಯದ ಮಟ್ಟ ಭಾರಿ ಉಲ್ಬಣಗೊಂಡ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.