ನವದೆಹಲಿ: ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ನೇಮಕಗೊಂಡ ಎಂಟೇ ತಿಂಗಳ ನಂತರ ಆ ಸ್ಥಾನದಿಂದ ತೆಗೆದುಹಾಕಲಾಗಿದೆ.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಿನ್ನಡೆ ಅವರನ್ನು ಸ್ಥಾನದಿಂದ ತೆಗೆದುಹಾಕಲು ಕಾರಣ ಎಂದು ಕಾರಣ ನೀಡಲಾಗಿದ್ದರೂ, ನೆರವು ಸಿಬ್ಬಂದಿ ತಂಡದ ಉನ್ನತ ಸದಸ್ಯರೊಬ್ಬರ ಜೊತೆ ಭಿನ್ನಾಭಿಪ್ರಾಯ ಈ ಕ್ರಮಕ್ಕೆ ಕಾರಣ ಎಂಬ ವದಂತಿಗಳು ಹರಿದಾಡಿವೆ.
41 ವರ್ಷ ವಯಸ್ಸಿನ ನಾಯರ್ ಅವರಿಗೆ ಮಂಡಳಿಯ ನಿರ್ಧಾರದ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐನ ನಂಬಲರ್ಹ ಮೂಲಗಳು ತಿಳಿಸಿವೆ.
‘ಇತ್ತೀಚಿನ ಟೆಸ್ಟ್ ಸರಣಿಗಳಲ್ಲಿ (ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ಭಾರತ ತಂಡದ ಹಿನ್ನಡೆ ಈ ಕ್ರಮಕ್ಕೆ ದಾರಿಮಾಡಿಕೊಟ್ಟಿದೆ. ಆದರೆ ನೆರವು ತಂಡದ ಪ್ರಮುಖ ಸಿಬ್ಬಂದಿ ಮತ್ತು ಭಾರತ ತಂಡದ ಹಿರಿಯ ಆಟಗಾರನ ಜೊತೆ ಭಿನ್ನಾಭಿಪ್ರಾಯವು ಅವರನ್ನು ಬಲಿಪಶು ಮಾಡಿದೆ ಎಂಬ ಭಾವನೆ ಬಿಸಿಸಿಐನಲ್ಲಿ ಮೂಡಿದೆ’ ಎಂದು ಮಂಡಳಿಯ ಮೂಲವೊಂದು ಪಿಟಿಐಗೆ ತಿಳಿಸಿದೆ.
ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರೂ ಮೂರು ವರ್ಷಗಳ ಅವಧಿ ಪೂರೈಸಿದ್ದು ಅವರೂ ತಮ್ಮ ಹುದ್ದೆಗಳನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ. ಬಿಸಿಸಿಐನ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಅನ್ವಯ ನೆರವು ಸಿಬ್ಬಂದಿಯ ಅವಧಿಯನ್ನು ಮೂರು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.
ಭಾರತ ತಂಡದ ಮೊತ್ತಮೊದಲ ಸ್ಟ್ರೆಂಥ್ ಅಂಡ್ ಕಂಡಿಷನಿಂಗ್ ಕೋಚ್ ಆಗಿದ್ದ ಅಡ್ರಿಯಾನ್ ಲೆ ರೋ ಅವರು ಮತ್ತೆ ಈ ಹುದ್ದೆಗೆ ಮರಳುವ ಸಾಧ್ಯತೆಯಿದೆ. 2003ರ ವಿಶ್ವಕಪ್‌ನಲ್ಲಿ ಅವರು ಮೊದಲ ಬಾರಿಗೆ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಈ ಬೆಳವಣಿಗೆಗಳ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಪ್ರತಿಕ್ರಿಯೆ ಕೇಳಿದಾಗ, ಅವರು ವಿವರ ನೀಡಲಿಲ್ಲ. ‘ಕೆಲವು ವಿಷಯಗಳನ್ನು ಅಂತಿಮಗೊಳಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು’ ಎಂದಷ್ಟೇ ತಿಳಿಸಿದರು.
ಭಾರತ ತಂಡದ ಪರ ಮೂರು ಏಕದಿನ ಪಂದ್ಯ ಮತ್ತು 103 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅಭಿಷೇಕ್ ನಾಯರ್ ಅವರೂ ಪಿಟಿಐ ಕಳುಹಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.