ADVERTISEMENT

ರಣಜಿ ಫೈನಲ್‌ಗೆ ಬಂಗಾಳ; ಕುತೂಹಲದ ಘಟ್ಟದಲ್ಲಿ ಕರ್ನಾಟಕ–ಸೌರಾಷ್ಟ್ರ ಸೆಮಿಫೈನಲ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 9:09 IST
Last Updated 12 ಫೆಬ್ರುವರಿ 2023, 9:09 IST
ಫೈನಲ್‌ಗೆ ಲಗ್ಗೆ ಇಟ್ಟ ಬಂಗಾಳ ಆಟಗಾರರ ಸಂಭ್ರಮ
ಫೈನಲ್‌ಗೆ ಲಗ್ಗೆ ಇಟ್ಟ ಬಂಗಾಳ ಆಟಗಾರರ ಸಂಭ್ರಮ   

ಇಂದೋರ್‌: ಮಧ್ಯಪ್ರದೇಶ ತಂಡದ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಬಂಗಾಳ ತಂಡ ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇಲ್ಲಿನ ಹೋಳ್ಕರ್‌ ಕ್ರಿಕೆಟ್‌ ಮೈದಾನದಲ್ಲಿ ಫೆಬ್ರುವರಿ 8 ರಂದು (ಬುಧವಾರ) ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಂಗಾಳ ಪಡೆ 438 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮಧ್ಯಪ್ರದೇಶ ತಂಡ 170 ರನ್‌ ಗಳಿಸುವಷ್ಟರಲ್ಲಿಯೇ ಸರ್ವಪತನ ಕಂಡಿತ್ತು.

268 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬಂಗಾಳ, 279 ರನ್‌ ಗಳಿಸಿ ಆಲೌಟ್‌ ಆಯಿತು. ಇದರೊಂದಿಗೆ ಎದುರಾಳಿಗೆ 548 ರನ್‌ಗಳ ಬೃಹತ್‌ ಗುರಿ ನೀಡಿತು. ಆದರೆ, ಮತ್ತೊಮ್ಮೆ ಪರಿಣಾಮಕಾರಿ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲವಾದ ಮಧ್ಯಪ್ರದೇಶ ಬ್ಯಾಟರ್‌ಗಳು 241 ರನ್‌ ಗಳಿಸಲಷ್ಟೇ ಶಕ್ತರಾದರು.

ADVERTISEMENT

ಹೀಗಾಗಿ 306 ರನ್‌ ಅಂತರದ ಬೃಹತ್‌ ಜಯ ಸಾಧಿಸಿದ ಬಂಗಾಳ, ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕುತೂಹಲದ ಘಟ್ಟದಲ್ಲಿ ಕರ್ನಾಟಕ–ಸೌರಾಷ್ಟ್ರ ಪಂದ್ಯ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಸೆಣಸಾಟ ನಡೆಸುತ್ತಿವೆ.

ಕರ್ನಾಟಕ ನೀಡಿರುವ 115 ರನ್‌ಗಳ ಗುರಿ ಬೆನ್ನತ್ತಿರುವ ಸೌರಾಷ್ಟ್ರ 27 ಓವರ್‌ಗಳ ಅಂತ್ಯಕ್ಕೆ 87 ರನ್‌ ಗಳಿಸಿ ಪ್ರಮುಖ ಐದು ವಿಕೆಟ್‌ ಕಳೆದುಕೊಂಡಿದೆ. ಗೆಲ್ಲಲು ಇನ್ನು 28 ರನ್ ಗಳಿಸಬೇಕಿದೆ.

ಫೈನಲ್‌ ಪ್ರವೇಶಿಸಲು ಕರ್ನಾಟಕ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಅದಕ್ಕಾಗಿ ಸೌರಾಷ್ಟ್ರ ಪಡೆಯನ್ನು ಆಲೌಟ್‌ ಮಾಡಲೇಬೇಕಿದೆ. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿರುವ ಸೌರಾಷ್ಟ್ರ, ಪಂದ್ಯವನ್ನು ಡ್ರಾ ಮಾಡಿಕೊಂಡರೂ ಟೂರ್ನಿಯ ಅಂತಿಮ ಹಂತಕ್ಕೆ ಲಗ್ಗೆ ಇಡಲಿದೆ. ಹೀಗಾಗಿ ಪಂದ್ಯ ಕುತೂಹಲ ಮೂಡಿದೆ.

ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 407 ರನ್‌ ಕಲೆಹಾಕಿತ್ತು. ಇದಕ್ಕುತ್ತರವಾಗಿ ಸೌರಾಷ್ಟ್ರ 527 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತ್ತು. 120 ರನ್‌ ಹಿನ್ನಡೆಯೊಂದಿಗೆ ಅಂತಿಮ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ 234 ರನ್‌ಗಳಿಸಿ ಸರ್ವಪತನ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.