ADVERTISEMENT

ಪ್ಯಾಟ್ ಕಮಿನ್ಸ್ ತಾಯಿ ನಿಧನ; ಕಪ್ಪು ಪಟ್ಟಿ ಧರಿಸಿ ಆಡಲಿಳಿದ ಆಸಿಸ್ ಕ್ರಿಕೆಟಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2023, 10:03 IST
Last Updated 10 ಮಾರ್ಚ್ 2023, 10:03 IST
ಪ್ಯಾಟ್‌ ಕಮಿನ್ಸ್ (ಪಿಟಿಐ ಚಿತ್ರ)
ಪ್ಯಾಟ್‌ ಕಮಿನ್ಸ್ (ಪಿಟಿಐ ಚಿತ್ರ)   

ಅಹಮದಾಬಾದ್‌: ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಅವರ ತಾಯಿ ಮೃತಪಟ್ಟಿದ್ದಾರೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ನಮ್ಮ ಆಟಗಾರರು, ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಶುಕ್ರವಾರ ತಿಳಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ, ನಾಲ್ಕು ಪಂದ್ಯಗಳ 'ಬಾರ್ಡರ್‌–ಗಾವಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿ'ಯಲ್ಲಿ ಮುಖಾಮುಖಿಯಾಗಿವೆ. ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ, ಕಾಂಗರೂ ಪಡೆ ಮೂರನೇ ಪಂದ್ಯದಲ್ಲಿ ತಿರುಗೇಟು ನೀಡಿತ್ತು. ಅಂತಿಮ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿದೆ.

ಕಮಿನ್ಸ್‌ ತಾಯಿಯ ನಿಧನದ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟ್‌ ಆಸ್ಟ್ರೇಲಿಯಾ, 'ಮರಿಯಾ ಕಮಿನ್ಸ್‌ ಅವರು ತಡರಾತಿ ಮೃತಪಟ್ಟಿದ್ದು, ನಾವೆಲ್ಲ ತೀವ್ರ ದುಃಖದಲ್ಲಿದ್ದೇವೆ. ಆಸ್ಟ್ರೇಲಿಯಾ ಕ್ರಿಕೆಟ್‌ ಪರವಾಗಿ ನಾವು ಪ್ಯಾಟ್‌ ಕಮಿನ್ಸ್‌ ಅವರ ಕುಟುಂಬ ಹಾಗೂ ಸ್ನೇಹಿತರಿಗಾಗಿ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇವೆ. ಆಸ್ಟ್ರೇಲಿಯಾ ‍ಪುರುಷರ ತಂಡ ಮರಿಯಾ ಅವರ ಗೌರವಾರ್ಥವಾಗಿ ಇಂದು ಕಪ್ಪು ಪಟ್ಟಿ ಧರಿಸಿ ಆಡಲಿದೆ' ಎಂದು ತಿಳಿಸಿತ್ತು.

ADVERTISEMENT

ಕಮಿನ್ಸ್‌ ಅವರು ತಮ್ಮ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯದ ಬಳಿಕ ಆಸ್ಟ್ರೇಲಿಯಾಗೆ ವಾಪಸ್‌ ಆಗಿದ್ದರು. ಹೀಗಾಗಿ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ತಂಡದ ಹೊಣೆ ಹೊತ್ತಿದ್ದಾರೆ.

ಉತ್ತಮ ಮೊತ್ತದತ್ತ ಆಸ್ಟೇಲಿಯಾ
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆಹಾಕುವತ್ತ ಸಾಗಿದೆ. ಸದ್ಯ ಎರಡನೇ ದಿನದಾಟ ನಡೆಯುತ್ತಿದ್ದು, 150 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ಗಳನ್ನು ಕಳೆದುಕೊಂಡು 417 ರನ್‌ ಗಳಿಸಿದೆ. ಆರಂಭಿಕ ಬ್ಯಾಟರ್‌ ಉಸ್ಮಾನ್‌ ಖ್ವಾಜಾ (180 ರನ್‌) ಹಾಗೂ ಕೆಮರೂನ್‌ ಗ್ರೀನ್‌ (114 ರನ್‌) ಅಮೋಘ ಶತಕ ಸಿಡಿಸಿ ಔಟಾಗಿದ್ದಾರೆ.

ಇನ್ನೂ ಎರಡು ವಿಕೆಟ್‌ಗಳು ಬಾಕಿ ಇದ್ದು, 450 ರನ್‌ ಗಳಿಸುವ ವಿಶ್ವಾಸದಲ್ಲಿ ಪ್ರವಾಸಿ ತಂಡವಿದೆ. ಸದ್ಯ ನಾಥನ್‌ ಲಯನ್‌ (10) ಮತ್ತು ಟಾಡ್‌ ಮರ್ಫಿ (4) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.