ADVERTISEMENT

ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಮುಂದುವರಿಸುವುದರ ಔಚಿತ್ಯವೇನು?: ಇರ್ಫಾನ್ ಪಠಾಣ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 15:43 IST
Last Updated 5 ಜನವರಿ 2025, 15:43 IST
ಇರ್ಫಾನ್ ಪಠಾಣ್ 
ಇರ್ಫಾನ್ ಪಠಾಣ್    

ಸಿಡ್ನಿ: ಭಾರತ ಕ್ರಿಕೆಟ್ ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿಗೆ ಅಂತ್ಯಗೊಳಿಸಬೇಕು. ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ವೈಫಲ್ಯಕ್ಕೆ ಕಾರಣವಾಗುತ್ತಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಕಠಿಣ ಶ್ರಮಪಡುತ್ತಿಲ್ಲ. ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿಯೂ ಆಡುತ್ತಿಲ್ಲ. ಆದರೂ ಅವರನ್ನು ಮುಂದುವರಿಸುವುದರ ಔಚಿತ್ಯವೇನು ಎಂದು ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಪ್ರಶ್ನಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಬಾರ್ಡರ್‌–ಗಾವಸ್ಕರ್ ಟ್ರೋಫಿಯಲ್ಲಿ ಆಫ್‌ಸ್ಟಂಪ್ ಹೊರಗಿನ ಎಸೆತಗಳನ್ನು ತಡವಿ ಔಟಾಗಿದ್ದಾರೆ. ಇದೇ ತಪ್ಪನ್ನು ಪ್ರತಿಯೊಂದು ಇನಿಂಗ್ಸ್‌ನಲ್ಲಿಯೂ ಪುನರಾವರ್ತಿಸುತ್ತಿರುವುದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಸರಣಿಯ ಒಂಬತ್ತು ಇನಿಂಗ್ಸ್‌ಗಳಿಂದ ಅವರು 190 ರನ್ ಗಳಿಸಿದ್ದಾರೆ

ಭಾನುವಾರ ಟೆಸ್ಟ್ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌  ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಆಲ್‌ರೌಂಡರ್ ಇರ್ಫಾನ್, ‘ಸೂಪರ್ ಸ್ಟಾರ್ ಸಂಸ್ಕೃತಿಯನ್ನು ಅಂತ್ಯಗೊಳಿಸಬೇಕಿದೆ. ತಮ್ಮನ್ನು ತಾವು ಉತ್ತಮ ಪಡಿಸಿಕೊಂಡು, ತಂಡವನ್ನೂ  ಬಲಿಷ್ಠಗೊಳಿಸಬೇಕು. ಈ ಸರಣಿಗೂ ಮುನ್ನವೂ ಪಂದ್ಯಗಳು ಇದ್ದವು. ಅವುಗಳಲ್ಲಿ ಆಡಲು ಅವರಿಗೆ ಅವಕಾಶಗಳಿದ್ದವು‘ ಎಂದು ಇರ್ಫಾನ್ ಹೇಳಿದರು.

ADVERTISEMENT

‘ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಆಟಗಾರನೇ ತಮಗೆ ಅಗತ್ಯವಿಲ್ಲದಿದ್ದರೂ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದರು. ಅವರಿಗೆ ರನ್‌ ಗಳಿಸುವ  ಆಸೆ ಇರಲಿಲ್ಲ. ಆದರೆ 4–5 ದಿನ ಪಿಚ್‌ನಲ್ಲಿ ಕಾಲ ಕಳೆಯುವ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಲು ಅವರು ಆ ರೀತಿ ಮಾಡಿದ್ದರು. ವಿರಾಟ್ ಕೊಹ್ಲಿ ಅವರು ದೇಶಿ ಕ್ರಿಕೆಟ್ ಆಡಿ ಎಷ್ಟು ವರ್ಷಗಳಾದವು? ಬಹುಶಃ ಒಂದು ದಶಕಕ್ಕಿಂತಲೂ ಹೆಚ್ಚು’ ಎಂದೂ ಇರ್ಫಾನ್ ಹೇಳಿದರು.

ವಿರಾಟ್ ಅವರು 2012ರಲ್ಲಿ ದೆಹಲಿ ತಂಡದ ಪರವಾಗಿ ರಣಜಿ ಟ್ರೋಫಿಯಲ್ಲಿ ಆಡಿದ್ದರು.

‘2024ರಲ್ಲಿ ಭಾರತ ತಂಡವು ಆಡಿದ ಪಂದ್ಯಗಳ ಮೊದಲ ಇನಿಂಗ್ಸ್‌ಗಳಲ್ಹಿ ಕೊಹ್ಲಿಯ ಸರಾಸರಿ 15 ಇದೆ. ಕಳೆದ ಐದು ವರ್ಷಗಳ ಅವರ  ಸಸರಾಸರಿ 30 ಕೂಡ ಇಲ್ಲ. ಇಷ್ಟಾಗಿಯೂ ಭಾರತ ತಂಡದಲ್ಲಿರಲು ಅವರು ಅರ್ಹರೇ? ಅದರ ಬದಲಿಗೆ ಯುವ ಆಟಗಾರರಿಗೆ ಅವಕಾಶಗಳನ್ನು ಕೊಡಿ. ಹೊಸದಾಗಿ ಆಡುವ ಆಟಗಾರರೇ 25 ರಿಂದ 30ರ ಸರಾಸರಿಯಲ್ಲಿ ರನ್ ಗಳಿಸುತ್ತಾರೆ. ತಂಡ ಮೊದಲು ವ್ಯಕ್ತಿಗಳಲ್ಲ’ ಎಂದು ಇರ್ಫಾನ್ ಖಾರವಾಗಿ ನುಡಿದರು.

‘ವಿರಾಟ್ ಅವರು ಭಾರತ ತಂಡಕ್ಕೆ ಅಮೋಘವಾದ ಕೊಡುಗೆಗಳನ್ನು ನೀಡಿರುವ ಆಟಗಾರ. ಬಹಳಷ್ಟು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದಾರೆ. ತಪ್ಪು ತಿದ್ದಿಕೊಳ್ಳುವಲ್ಲಿ ಅವರು ಗಂಭೀರವಾಗಿ ಚಿಂತಿಸುತ್ತಿಲ್ಲವೇ? ಸನ್ನಿ ಸರ್ (ಸುನಿಲ್ ಗಾವಸ್ಕರ್) ಕ್ರೀಡಾಂಗಣದಲ್ಲಿಯೇ ಇದ್ದರು. ಅವರು ಅಥವಾ ಇನ್ನೊಬ್ಬರು ಯಾರಾದರೂ ಹಿರಿಯರ ಸಲಹೆ ಪಡೆಯಲು ಎಷ್ಟು ಸಮಯ ಬೇಕು’ ಎಂದೂ ಇರ್ಫಾನ್ ಪ್ರಶ್ನಿಸಿದರು.

ಸುನಿಲ್ ಗಾವಸ್ಕರ್ 

ಸಿಗದ ಆಹ್ವಾನ: ಗಾವಸ್ಕರ್ ಅಸಮಾಧಾನ

ಸಿಡ್ನಿ: ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿ ಜಯಿಸಿದ  ಆಸ್ಟ್ರೇಲಿಯಾ ತಂಡಕ್ಕೆ ಪ್ರಶಸ್ತಿ ನೀಡಲು ತಮ್ಮನ್ನು ಆಹ್ವಾನಿಸದ ಆಯೋಜಕರ ವಿರುದ್ಧ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ತಂಡವು 3–1ರಿಂದ ಭಾರತದ ಎದುರು ಸರಣಿ ಜಯಿಸಿತು. ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಅ್ಯಲನ್ ಬಾರ್ಡರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಗಾವಸ್ಕರ್ ಅವರು ಕ್ರೀಡಾಂಗಣದಲ್ಲಿಯೇ ಹಾಜರಿದ್ದರು. ಆದರೂ ಅವರಿಗೆ ಆಹ್ವಾನ ನೀಡಿರಲಿಲ್ಲ.

‘ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದ್ದರೆ ಬಹಳ ಸಂತೋಷದಿಂದ ಅಲ್ಲಿರುತ್ತಿದ್ದೆ. ಏಕೆಂದರೆ ಇದು ಬಾರ್ಡರ್–ಗಾವಸ್ಕರ್ ಟ್ರೋಫಿ ಮತ್ತು ಆಸ್ಟ್ರೇಲಿಯಾ–ಭಾರತದ್ದು’ ಎಂದು ಕೋಡ್‌ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

‘ಆಸ್ಟ್ರೇಲಿಯಾ ಜಯಿಸಿದ್ದು ನನಗೇನೂ ಬೇಸರವಿಲ್ಲ. ಅವರಿಗೆ ಪ್ರಶಸ್ತಿ ನೀಡಲು ಭಾಗಿಯಾಗಲು ನನಗೇನೂ ಹಿಂಜರಿಕೆ ಇರಲಿಲ್ಲ. ಅವರು ತಮ್ಮ ಎದುರಾಳಿಗಿಂತ ಉತ್ತಮ ಕ್ರಿಕೆಟ್ ಆಡಿದರು. ಅದಕ್ಕಾಗಿ ಗೆದ್ದರು. ನಾನೊಬ್ಬ ಭಾರತೀಯನಾಗಿ ನನ್ನ ಉತ್ತಮ ಸ್ನೇಹಿತ ಆ್ಯಲನ್ ಬಾರ್ಡರ್‌ ಜೊತೆಗೂಡಿ  ಪ್ರಶಸ್ತಿ ಪ್ರದಾನ ಮಾಡಲು ಹೆಮ್ಮೆಪಡುತ್ತಿದ್ದೆ’ ಎಂದೂ ಗಾವಸ್ಕರ್ ಹೇಳಿದರು.

ಒಂದೊಮ್ಮೆ ಭಾರತ ತಂಡವು ಸಿಡ್ನಿ ಟೆಸ್ಟ್‌ನಲ್ಲಿ ಜಯಿಸಿದ್ದರೆ ಸರಣಿ 2–2ರಿಂದ ಸಮವಾಗುತ್ತಿತ್ತು. ಆಗ ಭಾರತ ತಂಡದ ನಾಯಕ ಜಸ್‌ಪ್ರೀತ್ ಬೂಮ್ರಾ ಅವರಿಗೆ ಟ್ರೋಫಿ ನೀಡಲು ಗಾವಸ್ಕರ್  ಇರುತ್ತಿದ್ದರು. ಈ ಬಗ್ಗೆ ಗಾವಸ್ಕರ್ ಅವರಿಗೆ ತಿಳಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1996–97ರಿಂದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ತುರುಸಿನ ಪೈಪೋಟಿಯಿರುವ ಸರಣಿಯಾಗಿ ರೂಪುಗೊಂಡಿದೆ.

ಅಕ್ಷಮ್ಯ
‘ಭಾರತ ತಂಡದ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡದೇ ಹೋದರೆ ಅದು ಅಕ್ಷಮ್ಯ. ಮುಖ್ಯಕೋಚ್ ಗೌತಮ್ ಗಂಭೀರ್ ಅವರು ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಗಾವಸ್ಕರ್ ಹೇಳಿದ್ದಾರೆ. ‘ ಆಟಗಾರರ ತಾಂತ್ರಿಕ ಕೌಶಲಗಳಲ್ಲಿ ಲೋಪಗಳನ್ನು ನಾವು ನೋಡುತ್ತಿದ್ದೇವೆ. ಒಂದೇ ತರಹದ ತಪ್ಪುಗಳು ಮರುಕಳಿಸುತ್ತಿವೆ. ನಾನು ಇದೊಂದೇ ಸರಣಿಯ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಎದುರು ಭಾರತ ತಂಡದವರು ಇದೇ ರೀತಿ ಆಡಿದ್ದರು. ಮುಂಬರುವ ಡಬ್ಲ್ಯುಟಿಸಿ ಸರಣಿಗಳಿಗೆ ಸಿದ್ಧರಾಗಲು ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಮುಖ್ಯವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.