
ಮೆಲ್ಬರ್ನ್: ಆಸ್ಟ್ರೇಲಿಯಾದ ಬೌಲರ್ ಬ್ರೆಟ್ ಲೀ ಅವರಿಗೆ ಅತಿ ವೇಗವಾಗಿ ಬೌಲಿಂಗ್ ಮಾಡಬೇಕೆಂಬ ವ್ಯಾಮೋಹ ಬಾಲ್ಯದಿಂದಲೇ ಇತ್ತು. ಗಂಟೆಗೆ 160 ಕಿ.ಮೀ. ವೇಗವಾಗಿ ಬೌಲಿಂಗ್ ಮಾಡಬೇಕೆಂಬ ಕನಸು ಒಂಬತ್ತನೇ ವಯಸ್ಸಿಗೇ ಚಿಗುರೊಡೆದಿತ್ತು. ಅದರ ಮುಂದೆ ಅವರಿಗೆ ವೈಯಕ್ತಿಕ ಮೈಲಿಗಲ್ಲುಗಳಾಗಲಿ, ಎದುರಾಳಿ ಬ್ಯಾಟರ್‌ನ ಸ್ಟಂಪ್ ಹಾರಿಸುವುದಾಗಲಿ ಅಷ್ಟೇನೂ ಖುಷಿ ಕೊಡಲಿಲ್ಲ.
49 ವರ್ಷ ವಯಸ್ಸಿನ ಲೀ ಅವರು ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಭಾನುವಾರ ಸೇರ್ಪಡೆಯಾಗಿದ್ದಾರೆ. ತಮ್ಮ ಕನಸನ್ನು ಸಾಕಾರಗೊಳಿಸಿದ ಕ್ರಿಕೆಟ್ ಜೀವನವನ್ನು ಅವರು ತಾಯಿ ಹೆಲೆನ್ ಅವರಿಗೆ ಸಮರ್ಪಿಸಿದ್ದಾರೆ. ಹೆಲೆನ್ ಅವರು ಸ್ಪ್ರಿಂಟರ್ (ವೇಗದ ಓಟಗಾರ್ತಿ) ಆಗಿದ್ದರು.
‘ಅದು (160 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದ್ದು) ನನಗೆ, ಯಾವುದೇ ವಿಕೆಟ್‌ಗಳಿಗಿಂತ ಹೆಚ್ಚಿನ ಸಂತಸ ನೀಡಿತು. ನಿಜ, ತಂಡವಾಗಿ 2003ರ ವಿಶ್ವಕಪ್ ಗೆಲುವು, ಸತತ 16 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಖುಷಿ ನೀಡಿದೆ. ಅದು ನಮ್ಮ ಮೇರುಸಾಧನೆ’ ಎಂದು ಅವರು ಹೇಳಿರುವುದನ್ನು ಕ್ರಿಕೆಟ್.ಕಾಮ್.ಎಯು. ಉದ್ಧರಿಸಿದೆ. ‘ದೀರ್ಘಕಾಲದ ಕನಸು ಸಾಕಾರವಾದಾಗ ಅದು ಹೆಚ್ಚು ಸಂತೃಪ್ತಿ ನೀಡುತ್ತದೆ’ ಎಂದಿದ್ದಾರೆ ಲೀ.
ಅವರು ವಿವಿಧ ಮಾದರಿಯ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 718 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಅತಿ ವೇಗವಾಗಿ ಚೆಂಡೆಸೆಯುವ ಬೌಲರ್‌ಗಳಲ್ಲಿ ಲೀ ಹೆಸರು ಪ್ರಮುಖವಾಗಿ ಕಾಣುತ್ತದೆ.
‘ವೇಗವಾಗಿ ಬೌಲಿಂಗ್ ಮಾಡುವ ಪ್ರತಿಭೆ ನನಗೆ ದೈವದತ್ತವಾಗಿ ಒಲಿದಿತ್ತು. ಅದರಲ್ಲೂ ರನ್‌ಅಪ್ ನನ್ನ ಪಾಲಿನ ದೊಡ್ಡ ಆಸ್ತಿ’ ಎಂದಿದ್ದಾರೆ.
ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ 2003ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಮರ್ವಾನ್ ಅಟಪಟ್ಟು ಅವರ ವಿಕೆಟ್ ಗಳಿಸಿದ್ದ ಲೀ ಅವರ ಎಸೆತ 160.1 ಕಿ.ಮೀ. ವೇಗ ಹೊಂದಿತ್ತು. ‘ಆ ಪಂದ್ಯದಲ್ಲಿ ನಾವು ಒತ್ತಡದಲ್ಲಿದ್ದೆವು. 212ರ ಮೊತ್ತ ರಕ್ಷಿಸಿಕೊಳ್ಳಬೇಕಿತ್ತು. ತಂಡ ನನ್ನಿಂದ ಒಳ್ಳೆಯ ಬೌಲಿಂಗ್ ನಿರೀಕ್ಷಿಸಿತ್ತು. ಆ ಎಸೆತದ ವೇಗ 160 ಕಿ.ಮೀ. (ಗಂಟೆಗೆ) ಎಂದು ಸ್ಕೋರ್ ಬೋರ್ಡ್‌ನಲ್ಲಿ ತೋರಿಸಿದಾಗ ನನಗೆ ಅದು ವಿಶೇಷ ಗಳಿಗೆ ಎನಿಸಿತು’ ಎಂದಿದ್ದಾರೆ ಲೀ.
2005ರ ಮಾರ್ಚ್ 5ರಂದು ನೇಪಿಯರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದ ಐದನೇ ಏಕದಿನ ಪಂದ್ಯ ಅವರಿಗೆ ಸ್ಮರಣೀಯ. ಆ ಪಂದ್ಯದಲ್ಲಿ 160.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.