ADVERTISEMENT

ಟೀಮ್ ಇಂಡಿಯಾಗೆ ಗಾಯಾಳುಗಳ ಸಮಸ್ಯೆ: ಜಡೇಜಾ, ವಿಹಾರಿ ಬಳಿಕ ಬೂಮ್ರಾ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 15:59 IST
Last Updated 12 ಜನವರಿ 2021, 15:59 IST
ಜಸ್‌ಪ್ರೀತ್ ಬೂಮ್ರಾ: ಪಿಟಿಐ ಸಂಗ್ರಹ ಚಿತ್ರ
ಜಸ್‌ಪ್ರೀತ್ ಬೂಮ್ರಾ: ಪಿಟಿಐ ಸಂಗ್ರಹ ಚಿತ್ರ   

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಕಿಬ್ಬೊಟ್ಟೆ ಸ್ನಾಯು ಸೆಳೆತದಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ.

ಭಾರತದ ಬೌಲಿಂಗ್ ಪಡೆಯ ಪ್ರಮುಖ ಅಸ್ತ್ರವಾಗಿರುವ ಬೂಮ್ರಾ ಅವರಿಗೆ ಸಿಡ್ನಿಯ ಡ್ರಾಗೊಂಡ ಟೆಸ್ಟ್ ಪಂದ್ಯದ ಸಂದರ್ಭ ತೀವ್ರ ನೋವು ಕಾಣಿಸಿಕೊಂಡಿತ್ತು.

ಈಗಾಗಲೇ, ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ಸಹ 4ನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಮಧ್ಯೆಯೇ, ಬೂಮ್ರಾ ಸಹ ಹೊರಗುಳಿಯುತ್ತಿರುವುದುಭಾರತಕ್ಕೆ ನುಂಗಲಾರದ ತುತ್ತಾಗಿದೆ.

ADVERTISEMENT

ಸ್ಕ್ಯಾನಿಂಗ್ ವೇಳೆ ಬೂಮ್ರಾಗೆ ಸ್ನಾಯು ಸೆಳೆತ ಸಮಸ್ಯೆ ಕಂಡುಬಂದಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬೂಮ್ರಾ ಅವರ ಗಾಯ ಉಲ್ಬಣಕ್ಕೆ ಅವಕಾಶ ನೀಡದೆ ವಿಶ್ರಾಂತಿ ನೀಡಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ.

"ಸಿಡ್ನಿಯಲ್ಲಿ ಫೀಲ್ಡಿಂಗ್ ವೇಳೆ ಜಸ್‌ಪ್ರೀತ್ ಬೂಮ್ರಾ ಕಿಬ್ಬೊಟ್ಟೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಬ್ರಿಸ್ಬೆನ್‌ ಪಂದ್ಯದಿಂದ ಹೊರಗುಳಿಯಲಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಗೆ ಲಭ್ಯರಾಗುವ ನಿರೀಕ್ಷೆ ಇದೆ," ಬಿಸಿಸಿಐ ತಿಳಿಸಿದೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಅನುಭವವಿರುವ ಮತ್ತು ನಟರಾಜನ್ ಅವರಿಗಿಂತಲೂ ಉತ್ತಮ ಬ್ಯಾಟಿಂಗ್ ಕೌಶಲ್ಯವಿರುವ ಶಾರ್ದೂಲ್ ಠಾಕೂರ್ ಅವರನ್ನು ರವೀಂದ್ರ ಜಡೇಜಾ ಅವರ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.