ಬೆಂಗಳೂರು: ಕರ್ನಾಟಕದ ಬೀದರ್‌ನಲ್ಲಿ ಜನಿಸಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಸರಿಯಾಗಿ ಒಂದು ತಿಂಗಳ ಹಿಂದಷ್ಟೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ಪದಾರ್ಪಣೆ ಮಾಡಿದರು. ಇದೀಗ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಫೆಬ್ರುವರಿ 9ರಂದು ಕಟಕ್‌ನಲ್ಲಿ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದಲ್ಲಿ ಅವರು ಮೊದಲ ಬಾರಿಗೆ ಆಡಿದ್ದರು. ಅದಕ್ಜೂ ಮುನ್ನ ಟಿ20 ಮತ್ತು ಐಪಿಎಲ್‌ನಲ್ಲಿ ಗಮನ ಸೆಳೆದಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅವರನ್ನು ಭಾರತ ತಂಡಕ್ಕೆ ಕೊನೆಯ ಕ್ಷಣದಲ್ಲಿ ಸೇರ್ಪಡೆ ಮಾಡಲಾಗಿತ್ತು. ಅವರಿಗಾಗಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಬಿಡಲಾಗಿತ್ತು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಹಲವರಿಂದ ಟೀಕೆಗಳು ವ್ಯಕ್ತವಾಗಿದ್ದವು. ವರುಣ್ ಸೇರಿದಂತೆ ಐವರು ಸ್ಪಿನ್ನರ್‌ಗಳನ್ನು ತಂಡದಲ್ಲಿ ಇರುವುದರ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದರು.
33 ವರ್ಷದ ವರುಣ್ ಅವರು ಗುಂಪು ಹಂತದ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ಎದುರು 5 ವಿಕೆಟ್ ಗೊಂಚಲು ಗಳಿಸಿದ್ದರು. ಸೆಮಿಫೈನಲ್‌ನಲ್ಲಿ 2 ಮತ್ತು ಫೈನಲ್‌ನಲ್ಲಿ 2 ವಿಕೆಟ್‌ಗಳನ್ನು ಗಳಿಸಿದರು. ಅವರು ಸ್ಪಿನ್ ಎಸೆತಗಳನ್ನು ಒಂದು ಹದವಾದ ವೇಗದಲ್ಲಿ ಹಾಕುತ್ತಾರೆ. ಇದರಿಂದಾಗಿ ಬ್ಯಾಟರ್‌ಗಳು ವಿಚಲಿತರಾಗಿ ಔಟಾಗುತ್ತಾರೆ. ಒಟ್ಟಾರೆ ಆಯ್ಕೆ ಸಮಿತಿ ಮತ್ತು ತಂಡದ ಕೋಚ್ ಗೌತಮ್ ಗಂಭೀರ್ ಅವರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ.
‘ಲೈನ್ ಮತ್ತು ಲೆಂಗ್ತ್ ಅನ್ನು ನಿರಂತರವಾಗಿ ನಿರ್ವಹಿಸುವತ್ತಲೇ ನನ್ನ ಗಮನ’ ಎಂದು ಹೇಳುವ ಚಕ್ರವರ್ತಿ ದೇಶಿ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಾರೆ.
ವರುಣ್ ಅವರ ತಂದೆ ವಿನೋದ್ ಚಕ್ರವರ್ತಿಯವರು ಐಟಿಎಸ್ ಅಧಿಕಾರಿಯಾಗಿ ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಾರೆ. ತಾಯಿ ಮಾಲಿನಿ ಅವರು ಕರ್ನಾಟಕದವರು. ಆದರೆ ವರುಣ್ ಅವರು ಬೆಳೆದಿದ್ದು ಚೆನ್ನೈನಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.