ADVERTISEMENT

ಕೆಳ ಕ್ರಮಾಂಕದಲ್ಲಿ ಗರಿಷ್ಠ ರನ್ ಜೊತೆಯಾಟ; ಭಾರತದ ಎದುರು ಬಾಂಗ್ಲಾ ಜೋಡಿಯ ದಾಖಲೆ

Champions Trophy

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 15:07 IST
Last Updated 20 ಫೆಬ್ರುವರಿ 2025, 15:07 IST
<div class="paragraphs"><p>ಬಾಂಗ್ಲಾದೇಶದ  ಜಾಕರ್‌ ಅಲಿ ಹಾಗೂ&nbsp;ತೌಫಿಕ್‌ ಹೃದೊಯ್‌</p></div>

ಬಾಂಗ್ಲಾದೇಶದ ಜಾಕರ್‌ ಅಲಿ ಹಾಗೂ ತೌಫಿಕ್‌ ಹೃದೊಯ್‌

   

ಪಿಟಿಐ ಚಿತ್ರಗಳು

ದುಬೈ: ಬಾಂಗ್ಲಾದೇಶದ ತೌಫಿಕ್‌ ಹೃದೊಯ್‌ ಮತ್ತು ಜಾಕರ್‌ ಅಲಿ ಜೋಡಿ, ಭಾರತ ವಿರುದ್ಧದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಅಮೋಘ ಜೊತೆಯಾಟವಾಡುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕೆಳಕ್ರಮಾಂಕದಲ್ಲಿ ಗರಿಷ್ಠ ಮೊತ್ತ ಕಲೆಹಾಕಿದ ದಾಖಲೆ ಬರೆಯಿತು.

ADVERTISEMENT

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾ ತಂಡ, ಕೇವಲ 8.3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ತೌಫಿಕ್‌ ಹಾಗೂ ಜಾಕರ್‌, 6 ವಿಕೆಟ್‌ ಪಾಲುದಾರಿಕೆಯಲ್ಲಿ 154 ರನ್‌ ಕಲೆಹಾಕಿದರು. ಈ ಜೋಡಿಯನ್ನು, ವೇಗಿ ಮೊಹಮ್ಮದ್‌ ಶಮಿ 43ನೇ ಓವರ್‌ನಲ್ಲಿ ಬೇರ್ಪಡಿಸಿದರು.

ಜಾಕರ್‌ 114 ಎಸೆತಗಳಲ್ಲಿ 68 ರನ್‌ ಗಳಿಸಿದರೆ, ತೌಫಿಕ್‌ 118 ಎಸೆತಗಳಲ್ಲಿ 100 ರನ್‌ ಗಳಿಸಿ ಔಟಾದರು.

ದಕ್ಷಿಣ ಆಫ್ರಿಕಾದ ಜಸ್ಟಿನ್‌ ಕೆಂಪ್‌ ಹಾಗೂ ಮಾರ್ಕ್ ಬೌಚರ್‌ ಜೋಡಿ, 2006ರಲ್ಲಿ ಪಾಕಿಸ್ತಾನ ವಿರುದ್ಧ 131 ರನ್‌ ಗಳಿಸಿದ್ದರು. ಅದು, 6ನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಹೆಚ್ಚು ರನ್‌ ಹಾಕಿದ ದಾಖಲೆಯಾಗಿತ್ತು.

ನ್ಯೂಜಿಲೆಂಡ್‌ನ ಕ್ರಿಸ್‌ ಕ್ರೇನ್‌ ಹಾಗೂ ಕ್ರಿಸ್‌ ಹ್ಯಾರಿಸ್‌ ಜೋಡಿ 2000ನೇ ಇಸವಿಯಲ್ಲಿ ಟೀಂ ಇಂಡಿಯಾ ಎದುರು 122 ರನ್‌ ಹಾಗೂ ಭಾರತದ ರಾಹುಲ್‌ ದ್ರಾವಿಡ್‌ ಹಾಗೂ ಮೊಹಮ್ಮದ್‌ ಕೈಫ್‌ 2002ರಲ್ಲಿ ಜಿಂಬಾಬ್ವೆ ವಿರುದ್ಧ 117 ರನ್‌ ಗಳಿಸಿದ್ದರು.

ಭಾರತಕ್ಕೆ 229 ರನ್ ಗುರಿ
ಭಾರತ ತಂಡದ ಬಿಗುವಿನ ಬೌಲಿಂಗ್‌ ದಾಳಿ ಎದುರು ಕಂಗೆಟ್ಟ ಬಾಂಗ್ಲಾದೇಶ, 49.4 ಓವರ್‌ಗಳಲ್ಲಿ 228 ರನ್‌ ಗಳಿಸಿ ಆಲೌಟ್ ಆಗಿದೆ. ವೇಗಿ ಮೊಹಮ್ಮದ್‌ ಶಮಿ ಐದು ವಿಕೆಟ್‌ ಸಾಧನೆ ಮಾಡಿದರು. ಹರ್ಷಿತ್ ರಾಣ ಮೂರು ಹಾಗೂ ಅಕ್ಷರ್ ಪಟೇಲ್‌ ಎರಡು ವಿಕೆಟ್‌ ಕಿತ್ತರು.

ಈ ಗುರಿ ಬೆನ್ನತ್ತಿರುವ ಭಾರತ 27 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 126 ರನ್‌ ಗಳಿಸಿದೆ. ನಾಯಕ ರೋಹಿತ್‌ ಶರ್ಮಾ 41 ರನ್‌ ಹಾಗೂ ವಿರಾಟ್‌ ಕೊಹ್ಲಿ 22 ರನ್‌ ಗಳಿಸಿ ಔಟಾಗಿದ್ದಾರೆ. 51 ರನ್‌ ಗಳಿಸಿರುವ ಉಪನಾಯಕ ಶುಭಮನ್ ಗಿಲ್‌, 8 ರನ್‌ ಗಳಿಸಿರುವ ಶ್ರೇಯಸ್‌ ಅಯ್ಯರ್‌ ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.