ಕೇನ್ ವಿಲಿಯಮ್ಸನ್
ಪಿಟಿಐ ಚಿತ್ರ
ದುಬೈ: ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಮತ್ತು ಭಾರತದ ಸ್ಪಿನ್ನರ್‌ಗಳ ನಡುವಣ ಹಣಾಹಣಿಯಾಗಲಿದೆ.
25 ವರ್ಷಗಳ ನಂತರ ಐಸಿಸಿ ಏಕದಿನ ಕ್ರಿಕೆಟ್ ಮಾದರಿಯ ಟ್ರೋಫಿ ಜಯಿಸುವ ಛಲದಲ್ಲಿ ಕಿವೀಸ್ ಬಳಗವಿದೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಲಯದಲ್ಲಿರುವ ಕೇನ್ ಆಟವೇ ತಂಡಕ್ಕೆ ಪ್ರಮುಖ ಶಕ್ತಿಯಾಗಿದೆ. ಸ್ಪಿನ್ ಎಸೆತಗಳನ್ನು ಎದುರಿಸುವಲ್ಲಿ ಅವರು ಸಮರ್ಥರಾಗಿದ್ದಾರೆ.
2000ನೇ ಇಸವಿಯಲ್ಲಿ ಕೆನ್ಯಾದಲ್ಲಿ ನಡೆದಿದ್ದ ಐಸಿಸಿ ನಾಕೌಟ್ ಟ್ರೋಫಿ (ಈಗ ಚಾಂಪಿಯನ್ಸ್ ಟ್ರೋಫಿ) ಟೂರ್ನಿಯಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಿತ್ತು. ಅದರ ನಂತರ ಐಸಿಸಿ ಟ್ರೋಫಿಯು ತಂಡಕ್ಕೆ ಒಲಿದಿಲ್ಲ.
ಇನ್ನೊಂದೆಡೆ ಭಾರತ ತಂಡವು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. 2017ರಲ್ಲಿ ರನ್ನರ್ಸ್ ಅಪ್ ಆಗಿತ್ತು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟದ ಸನಿಹದಲ್ಲಿದೆ. ಫೈನಲ್ ಪಂದ್ಯದಲ್ಲಿ ಇಬ್ಬರು ವೇಗಿಗಳು ಮತ್ತು ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.
ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆದಿದ್ದ ಪಿಚ್‌ನಲ್ಲಿಯೇ ಫೈನಲ್ ಆಯೋಜನೆಗೊಳ್ಳಲಿದೆ. ಈ ಪಿಚ್ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ತಾಂತ್ರಿಕವಾಗಿ ನುರಿತ ಬ್ಯಾಟರ್ ಆಗಿರುವ ಕೇನ್ ವಿಲಿಯಮ್ಸನ್ ಅವರು ಸ್ಪಿನ್ ಎದುರು ಉತ್ತಮವಾಗಿ ಆಡಬಲ್ಲವರು. ಸೆಮಿಫೈನಲ್‌ನಲ್ಲಿ ಅವರು ಶತಕ ಗಳಿಸಿದ್ದರು.
ಭಾರತದ ಸ್ಪಿನ್ನರ್‌ಗಳು ಈ ಪಿಚ್‌ನಲ್ಲಿ ಪರಿಣಾಮಕಾರಿಯಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ವರುಣ್ ಚಕ್ರವರ್ತಿಯನ್ನು ಎದುರಿಸುವುದು ಬಹಳ ಕಠಿಣ. ಕಳೆದ ಪಂದ್ಯದಲ್ಲಿ ವರುಣ್ ಅವರು ಮಿಚೆಲ್ ಸ್ಯಾಂಟನರ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಎಸೆತವು 113 ಕಿ.ಮೀ ವೇಗದ ಸೀಮ್ ಅಪ್ ಆಗಿತ್ತು.
‘ಕೆಲವೊಮ್ಮೆ ಪ್ರವಾಹದ ಎದುರು ಈಜುವ ಸಾಹಸ ಮಾಡಬೇಕಾಗುತ್ತದೆ. ಸ್ಪಿನ್ ದಾಳಿಯನ್ನು ಎದುರಿಸಲು ನಾವು ಎಲ್ಲ ರೀತಿಯಿಂದಲೂ ಸಿದ್ಧರಾಗುತ್ತಿದ್ದೇವೆ’ ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದರು.
‘ಕೇನ್ ಅವರು ದೊಡ್ಡ ಪಂದ್ಯಗಳಲ್ಲಿ ತಮ್ಮ ಸಮಚಿತ್ತ ಮತ್ತು ಶಾಂತ ಆಟದ ಮೂಲಕ ತಂಡಕ್ಕೆ ನೆರವಾಗಿರುವ ನಿದರ್ಶನಗಳು ಸಾಕಷ್ಟಿವೆ. ಅವರ ಮೇಲೆ ನಮಗೆ ಇಲ್ಲಿ ಸಂಪೂರ್ಣ ಭರವಸೆ ಇದೆ’ ಎಂದೂ ಗ್ಯಾರಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.