ADVERTISEMENT

Kane Williamson Milestone: 19,000 ರನ್ ಗಳಿಸಿದ ಮೊದಲ ಕಿವೀಸ್ ಬ್ಯಾಟರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2025, 13:37 IST
Last Updated 5 ಮಾರ್ಚ್ 2025, 13:37 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ಚಿತ್ರ ಕೃಪೆ: X/@BLACKCAPS)

ಲಾಹೋರ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ, ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಮಗದೊಂದು ದಾಖಲೆ ಬರೆದಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,000 ರನ್ ಗಳಿಸಿದ ನ್ಯೂಜಿಲೆಂಡ್‌ನ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಬುಧವಾರ) ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಕೇನ್, ಈ ಸ್ಮರಣೀಯ ಸಾಧನೆ ಮಾಡಿದ್ದಾರೆ.

ಅಲ್ಲದೆ ದಕ್ಷಿಣ ಆಫ್ರಿಕಾದ ವಿರುದ್ಧ ಏಕದಿನದಲ್ಲಿ ಸತತ ಮೂರು ಶತಕ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕೇನ್ 94 ಎಸೆತಗಳಲ್ಲಿ 10 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 102 ರನ್ ಗಳಿಸಿದರು.

ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದಲ್ಲಿ 19 ಸಾವಿರ ರನ್ ಪೂರ್ಣಗೊಳಿಸಿದ ಆಟಗಾರರ ಪಟ್ಟಿಯಲ್ಲಿ ಕೇನ್ ವಿಲಿಯಮ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 440ನೇ ಇನಿಂಗ್ಸ್‌ನಲ್ಲಿ ಕೇನ್ ಈ ಮೈಲಿಗಲ್ಲು ತಲುಪಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ವಿರಾಟ್ ಕೊಹ್ಲಿ 399 ಇನಿಂಗ್ಸ್‌ಗಳಲ್ಲಿ 19,000 ರನ್‌ಗಳ ಸಾಧನೆ ಮಾಡಿದ್ದರು.

34 ವರ್ಷದ ಕೇನ್ ವಿಲಿಯಮ್ಸನ್ ಒಟ್ಟಾರೆಯಾಗಿ ಏಕದಿನದಲ್ಲಿ 15ನೇ ಶತಕ ಗಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಗರಿಷ್ಠ ರನ್ ಸಾಧಕರು:

  • ಕೇನ್ ವಿಲಿಯಮ್ಸನ್: 19,075

  • ರಾಸ್ ಟೇಲರ್: 18,199

  • ಸ್ಟೀಫನ್ ಫ್ಲೆಮಿಂಗ್: 15,289

  • ಬ್ರೆಂಡನ್ ಮೆಕಲಮ್: 14,676

  • ಮಾರ್ಟಿನ್ ಗಪ್ಟಿಲ್: 13,463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.