ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ
–ಪಿಟಿಐ ಚಿತ್ರ
ಮುಂಬೈ: ಈ ಸಲದ ಐಪಿಎಲ್ ಟೂರ್ನಿಯ ಮೊದಲ ಹಂತದ ಏಳು ಪಂದ್ಯಗಳು ಮುಗಿದಿವೆ. ಎಲ್ಲ ತಂಡಗಳೂ ಎರಡನೇ ಸುತ್ತಿಗೆ ಕಾಲಿಡುತ್ತಿವೆ. ಪ್ಲೇ ಆಫ್ ಪ್ರವೇಶಿಸಲು ಈ ಹಂತದ ಪಂದ್ಯಗಳಲ್ಲಿ ಗಳಿಸುವ ಗೆಲುವುಗಳು ಪ್ರಮುಖವಾಗಲಿವೆ.
ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ, ಉಳಿದಿರುವ ಏಳು ಪಂದ್ಯಗಳಲ್ಲಿ ಕನಿಷ್ಟ ಆರರಲ್ಲಿ ಜಯಿಸುವ ಒತ್ತಡವಿದೆ. ಈ ಕಠಿಣ ಹಾದಿಯ ಅಭಿಯಾನ ಭಾನುವಾರ ಆರಂಭವಾಗಲಿದೆ.
ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡವು ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಎದುರು ಜಯಗಳಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಮುಂಬೈ ಮತ್ತೊಂದು ಗೆಲುವಿನತ್ತ ಚಿತ್ತ ನೆಟ್ಟಿದೆ.
ಮೊದಲ ಸುತ್ತಿನಲ್ಲಿ ಮುಂಬೈ ತಂಡವು ಚೆನ್ನೈ ಎದುರು ಸೋತಿತ್ತು. ಇದೀಗ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ಆಲ್‌ರೌಂಡರ್ ವಿಲ್ ಜ್ಯಾಕ್ಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಅವರು ಉತ್ತಮ ಲಯದಲ್ಲಿದ್ದಾರೆ. ಪಾಂಡ್ಯ ಕೂಡ ಕೊನೆಯ ಹಂತದ ಓವರ್‌ಗಳಲ್ಲಿ ಸಿಕ್ಸರ್ ಸಿಡಿಸುತ್ತಿದ್ದಾರೆ. ಅನುಭವಿ ರೋಹಿತ್ ಶರ್ಮಾ ಅವರು ಕಳೆದ ಪಂದ್ಯದಲ್ಲಿ 16 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ ಪವರ್‌ಪ್ಲೇನಲ್ಲಿ ತಮ್ಮ ಸಾಮರ್ಥ್ಯ ಮೆರೆದರೆ ಮುಂಬೈ ತಂಡಕ್ಕೆ ಹೆಚ್ಚು ಲಾಭ.
ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಸತತ ಐದು ಸೋಲುಗಳ ನಂತರ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಜಯಿಸಿತ್ತು. ಆ ಪಂದ್ಯದಲ್ಲಿ ಶಿವಂ ದುಬೆ ಮತ್ತು ಧೋನಿ ಅವರು ಮಿಂಚಿದ್ದರು. ಆದರೆ ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜ ಮತ್ತು ವಿಜಯಶಂಕರ್ ಅವರು ಉತ್ತಮವಾಗಿ ಆಡಿದರೆ ಚೆನ್ನೈ ಬ್ಯಾಟಿಂಗ್ ಮತ್ತಷ್ಟು ಬಲಗೊಳ್ಳುವುದು ಖಚಿತ. ಮಥೀಶ ಪಥಿರಾಣ, ಸ್ಪಿನ್ನರ್ ರವೀಂದ್ರ ಜಡೇಜ ಹಾಗೂ ಎಡಗೈ ವೇಗಿ ಖಲೀಲ್ ಅಹಮದ್ ಮೇಲೆ ಬೌಲಿಂಗ್ ವಿಭಾಗದ ಹೊಣೆ ಇದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.