ವಿರಾಟ್ ಕೊಹ್ಲಿ
(ಚಿತ್ರ ಕೃಪೆ: ಬಿಸಿಸಿಐ)
ದುಬೈ: ಚೇಸಿಂಗ್ ವೇಳೆ ತಮ್ಮ ಎಂದಿನ ಶೈಲಿಯ ಆಟವಾಡಿ ಭಾರತವನ್ನು ಗೆಲ್ಲಿಸಿದ ‘ಚೇಸಿಂಗ್ ಮಾಸ್ಟರ್’ ವಿರಾಟ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ಹರಿದುಬಂದಿದೆ. ಮಂಗಳವಾರ ಆಸ್ಟ್ರೇಲಿಯ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅವರು ಗಳಿಸಿದ 84 ರನ್‌ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಕೊಹ್ಲಿ ಆ ಇನಿಂಗ್ಸ್‌ನಲ್ಲಿ (ಏಕದಿನ ಪಂದ್ಯಗಳಲ್ಲಿ) ಚೇಸಿಂಗ್ ವೇಳೆಯೇ 8000 ರನ್ ಪೂರೈಸಿದ್ದರು.
‘ಅವರು ಚೇಸಿಂಗ್ ವೇಳೆಯೇ 30–40 ಶತಕ ಬಾರಿಸಿದ್ದಾರೆ. ಚೇಸಿಂಗ್ ವೇಳೆಯೇ ಹೆಚ್ಚು ರನ್ ಬಾರಿಸಿದ್ದಾರೆ. ಅದಕ್ಕಾಗಿಯೇ ಅವರಿಗೆ ‘ಚೇಸ್ ಮಾಸ್ಟರ್’ ಉಪಮೆಯಿದೆ’ ಎಂದು ಭಾರತ ತಂಡದ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್, ಕ್ರಿಕ್‌ಬಝ್ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
‘ಡಾಟ್‌ಬಾಲ್‌ಗಳನ್ನು ಕನಿಷ್ಠ ಪ್ರಮಾಣಕ್ಕಿಳಿಸಿ ಸ್ಕೋರ್‌ಬೋರ್ಡ್ ಏರುಗತಿಯಲ್ಲೇ ಇರುವಂತೆ ನೋಡಿಕೊಳ್ಳುವುದು ಕೊಹ್ಲಿ ಕೌಶಲ. ಒಂದು ಹಂತದಲ್ಲಿ ಅವರು 25 ಎಸೆತಗಳ ಪೈಕಿ ಅವರು 23ರಲ್ಲಿ ಅವರು ಒಂದು ರನ್ ಗಳಿಸಿದ್ದರು’ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಪಟ್ಟರು.
‘ಕೊಹ್ಲಿ ಸಿಂಗಲ್ಸ್ ಗಳಿಸುವುದನ್ನು ತಡೆಯಲು ಎದುರಾಳಿ ನಾಯಕ ಒಬ್ಬ ಹೆಚ್ಚುವರಿ ಫೀಲ್ಡರ್‌ನನ್ನು ಮುಂದೆ ತಂದರೆ ಅವರು ಫೀಲ್ಡರ್ ತಲೆಯ ಮೇಲಿಂದ ಚೆಂಡನ್ನು ಹೊಡೆದಟ್ಟಲು ಶುರುಮಾಡುತ್ತಾರೆ’ ಎಂದು ಹೇಳಿದರು.
‘ನಾನು ನೋಡಿದ ಆಟಗಾರರ ಪೈಕಿ ಕೊಹ್ಲಿ ಅವರು ಈ ಆಟದಲ್ಲಿ ಶ್ರೇಷ್ಠ ಚೇಸರ್. ನಮ್ಮ ವಿರುದ್ಧ ಹಲವು ಬಾರಿ ಇಂಥ ಆಟವಾಡಿದ್ದಾರೆ’ ಎಂದು ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಗುಣಗಾನ ಮಾಡಿದರು.
2008ರಲ್ಲಿ ಪದಾರ್ಪಣೆ ಮಾಡಿದ ನಂತರ 301 ಏಕದಿನ ಪಂದ್ಯಗಳಲ್ಲಿ ಕೊಹ್ಲಿ 74 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮೂರೂ ಮಾದರಿಗಳಲ್ಲಿ ಅವರು 82 ಶತಕಗಳನ್ನು ಬಾರಿಸಿದ್ದಾರೆ.
ಆಟವನ್ನು ಅರ್ಥೈಸುವಲ್ಲಿ ಕೊಹ್ಲಿ ಅವರಿಗೆ ಇರುವ ಅರಿವಿನ ಮಟ್ಟವನ್ನು ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದರು. ‘ಅವರೊಬ್ಬ ಅಮೋಘ ಏಕದಿನ ಕ್ರಿಕೆಟಿಗ’ ಎಂದು ಮೆಚ್ಚುಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.