ADVERTISEMENT

ಚೆನ್ನೈ‌ಗೆ ಅಗ್ರಪಟ್ಟ ಉಳಿಸಿಕೊಳ್ಳುವ ಸವಾಲು

ಇಂದು ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರು ಸೆಣಸಲಿರುವ ಧೋನಿ ಪಡೆ

ಪಿಟಿಐ
Published 4 ಮೇ 2019, 20:00 IST
Last Updated 4 ಮೇ 2019, 20:00 IST
ಮಹೇಂದ್ರ ಸಿಂಗ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶಕ್ತಿಯಾಗಿದ್ದಾರೆ
ಮಹೇಂದ್ರ ಸಿಂಗ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶಕ್ತಿಯಾಗಿದ್ದಾರೆ   

ಮೊಹಾಲಿ: ಈಗಾಗಲೇ ‘ಪ್ಲೇ ಆಫ್‌’ ಪ್ರವೇಶಿಸಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಪಾಲಿನ ಕೊನೆಯ ಲೀಗ್‌ ಪಂದ್ಯವನ್ನೂ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಳ್ಳುವ ಕನಸಿನಲ್ಲಿದೆ.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಹಣಾಹಣಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಬಳಗವು ಆತಿಥೇಯ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಸವಾಲು ಎದುರಿಸಲಿದೆ. ರವಿಚಂದ್ರನ್‌ ಅಶ್ವಿನ್‌ ಸಾರಥ್ಯದ ಪಂಜಾಬ್‌ ತಂಡವು ‘ಪ್ಲೇ ಆಫ್‌’ ರೇಸ್‌ನಿಂದ ಹೊರಬಿದ್ದಿದೆ. ಕೊನೆಯ ಪಂದ್ಯದಲ್ಲಾದರೂ ಗೆದ್ದು ಈ ಬಾರಿಯ ಅಭಿಯಾನ ಮುಗಿಸುವ ಆಲೋಚನೆ ಅಶ್ವಿನ್‌ ಬಳಗದ್ದು.

ಮುಂಬೈ ಇಂಡಿಯನ್ಸ್‌ ಎದುರು ಸೋತು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದ ಧೋನಿ ಪಡೆಯು, ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 80ರನ್‌ಗಳ ಜಯಭೇರಿ ಮೊಳಗಿಸಿ ಮತ್ತೆ ಅಗ್ರಪಟ್ಟಕ್ಕೇರಿತ್ತು. ಮಹಿ ಪಡೆಯ ಖಾತೆಯಲ್ಲಿ ಈಗ 18 ಪಾಯಿಂಟ್ಸ್‌ ಇದೆ.

ADVERTISEMENT

ಡೆಲ್ಲಿ ಎದುರಿನ ಪಂದ್ಯದಲ್ಲಿ ಚೆನ್ನೈ ತಂಡವು ಆಟದ ಎಲ್ಲಾ ವಿಭಾಗಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿತ್ತು. ನಾಯಕ ಧೋನಿ ಮತ್ತು ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಉತ್ತಮ ಜೊತೆಯಾಟ ಆಡಿದ್ದರು. ಇಮ್ರಾನ್‌ ತಾಹಿರ್‌ ಮತ್ತು ರವೀಂದ್ರ ಜಡೇಜ ಅವರು ತಮ್ಮ ಬತ್ತಳಿಕೆಯಲ್ಲಿದ್ದ ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿ ಶ್ರೇಯಸ್‌ ಅಯ್ಯರ್‌ ಬಳಗದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದರು.

ಧೋನಿ ಮತ್ತು ರೈನಾ, ಮೊಹಾಲಿ ಅಂಗಳದಲ್ಲೂ ರನ್‌ ಮಳೆ ಸುರಿಸುವ ವಿಶ್ವಾಸದಲ್ಲಿದ್ದಾರೆ. ಶೇನ್‌ ವಾಟ್ಸನ್‌, ಅಂಬಟಿ ರಾಯುಡು ಮತ್ತು ಫಾಫ್‌ ಡು ಪ್ಲೆಸಿ ಕೂಡಾ ಅಬ್ಬರಿಸಬೇಕಿದೆ. ಹಾಗಾದಲ್ಲಿ ಚೆನ್ನೈ ತಂಡದ ದೊಡ್ಡ ಮೊತ್ತದ ಕನಸು ಕೈಗೂಡಬಹುದು.

ಚೆನ್ನೈ ತಂಡ ಬೌಲಿಂಗ್‌ನಲ್ಲಿ ಬಲಯುತವಾಗಿದೆ. ತಾಹಿರ್‌ ಮತ್ತು ಜಡೇಜ ಜೊತೆ ದೀಪಕ್‌ ಚಾಹರ್‌, ಹರಭಜನ್‌ ಸಿಂಗ್‌ ಅವರೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು.

ಕಿಂಗ್ಸ್‌ ಇಲೆವನ್‌ ತಂಡವು ಹಿಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಸೋತಿತ್ತು. ಇದರೊಂದಿಗೆ ತಂಡದ ಪ್ಲೇ ಆಫ್‌ ಹಾದಿ ಮುಚ್ಚಿತ್ತು. 13 ಪಂದ್ಯಗಳಿಂದ 10 ಪಾಯಿಂಟ್ಸ್‌ ಕಲೆಹಾಕಿರುವ ಈ ತಂಡ ಪಟ್ಟಿಯಲ್ಲಿ ಏಳನೇ ಸ್ಥಾನ ಹೊಂದಿದೆ.

ಕೆ.ಎಲ್‌.ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ತಂಡಕ್ಕೆ ಅಬ್ಬರದ ಆರಂಭ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಕರ್ನಾಟಕದ ರಾಹುಲ್‌ ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 522ರನ್‌ಗಳಿವೆ. ಕ್ರಿಲ್‌ ಗೇಲ್ 13 ಪಂದ್ಯಗಳಿಂದ 462ರನ್‌ ಕಲೆಹಾಕಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಯಂಕ್‌ ಅಗರವಾಲ್‌, ಸ್ಯಾಮ್‌ ಕರನ್‌ ಮತ್ತು ನಿಕೋಲಸ್‌ ಪೂರನ್‌ ಅವರೂ ದೊಡ್ಡ ಮೊತ್ತ ಕಲೆಹಾಕಬೇಕು.

ಬೌಲಿಂಗ್‌ನಲ್ಲಿ ಆತಿಥೇಯ ತಂಡವು ಅಶ್ವಿನ್‌ ಮತ್ತು ಮೊಹಮ್ಮದ್‌ ಶಮಿ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಇವರಿಗೆ ಇತರರಿಂದಲೂ ಸೂಕ್ತ ಬೆಂಬಲ ಸಿಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.