ADVERTISEMENT

IND VS ENG| ಚೆಪಾಕ್‌ನಲ್ಲಿ ’ಮುಂಬೈ ಜೋಡಿ‘ ಮೋಡಿ

ಎರಡನೇ ಟೆಸ್ಟ್‌: ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದ ರೋಹಿತ್ ಶರ್ಮಾ–ಅಜಿಂಕ್ಯ ರಹಾನೆ; ಆತಿಥೇಯರಿಗೆ ಮೊದಲ ದಿನದ ಗೌರವ

ಪಿಟಿಐ
Published 13 ಫೆಬ್ರುವರಿ 2021, 16:54 IST
Last Updated 13 ಫೆಬ್ರುವರಿ 2021, 16:54 IST
ರೋಹಿತ್‌ ಶರ್ಮಾ ಮತ್ತು ಅಜಿಂಕ್ಯಾ ರಹಾನೆ
ರೋಹಿತ್‌ ಶರ್ಮಾ ಮತ್ತು ಅಜಿಂಕ್ಯಾ ರಹಾನೆ    

ಚೆನ್ನೈ: ಪ್ರೇಮಿಗಳ ದಿನಾಚರಣೆಯ ಮುನ್ನಾದಿನವಾದ ಶನಿವಾರ ರೋಹಿತ್ ಶರ್ಮಾ ಕ್ರಿಕೆಟ್‌ಪ್ರೇಮಿಗಳಿಗೆ ಚೆಂದದ ಶತಕದ ಉಡುಗೊರೆ ನೀಡಿದರು.

ಮುಂಬೈ ಜೋಡಿ ರೋಹಿತ್ ಮತ್ತು ಅಜಿಂಕ್ಯ ರಹಾನೆ ಶತಕದ ಜೊತೆಯಾಟದಿಂದ ಭಾರತ ತಂಡವು ಇಂಗ್ಲೆಂಡ್ ಎದುರು ಚೆಪಾಕ್‌ನಲ್ಲಿ ಆರಂಭವಾದ ಎರಡನೇ ಟೆಸ್ಟ್‌ನಲ್ಲಿ ಮೊದಲ ದಿನದ ಗೌರವ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡವು 88 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 300 ರನ್‌ಗಳನ್ನು ಗಳಿಸಿದೆ.

ಕಳೆದ ಟೆಸ್ಟ್‌ ಪಂದ್ಯಗಳಲ್ಲಿ ರನ್‌ಗಳ ಬರ ಎದುರಿಸಿದ್ದ ’ಹಿಟ್‌ಮ್ಯಾನ್‘ ರೋಹಿತ್ (161; 231ಎಸೆತ, 18ಬೌಂಡರಿ, 2ಸಿಕ್ಸರ್) ಮತ್ತು ರಹಾನೆ (67; 149ಎಸೆತ, 9 ಬೌಂಡರಿ) ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 162 ರನ್ ಸೇರಿಸಿದರು.

ADVERTISEMENT

ಇದರಿಂದಾಗಿ ಆರಂಭಿಕ ಆಘಾತದಿಂದ ಭಾರತ ತಂಡವು ಚೇತರಿಸಿಕೊಂಡಿತು ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ತಮ್ಮ ಹಾಗೂ ತಂಡದ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದರು. ಜೋಫ್ರಾ ಆರ್ಚರ್ ಬದಲು ಸ್ಥಾನ ಪಡೆದಿರುವ ಒಲಿ ಸ್ಟೋನ್ ಬೀಸಿದ ಎಲ್‌ಬಿಡಬ್ಲು ಬಲೆಗೆ ಗಿಲ್ ಬಿದ್ದರು.

ಆದರೆ ಇನ್ನೊಂದು ಬದಿಯಲ್ಲಿ ಚುರುಕಿನ ಹೊಡೆತಗಳಿಂದ ರನ್‌ಗಳಿಸುತ್ತಿದ್ದ ರೋಹಿತ್ ಆಟಕ್ಕೆ ಇದು ಅಡ್ಡಿಯಾಗಲಿಲ್ಲ. ಚೇತೆಶ್ವರ್ ಪೂಜಾರ (21; 58ಎ, 2ಬೌಂ) ತಮ್ಮ ಎಂದಿನ ರಕ್ಷಣಾತ್ಮಕ ಶೈಲಿಯಿಂದ ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು. ಇವರಿಬ್ಬರ ಜೊತೆಯಾಟದಲ್ಲಿ 85 ರನ್‌ಗಳು ಸೇರಿದವು.

ಆದರೆ ಸ್ಪಿನ್ನರ್ ಜ್ಯಾಕ್ ಲೀಚ್ ಹಾಕಿದ 21ನೇ ಓವರ್‌ನಲ್ಲಿ ಪೂಜಾರ ಅದೃಷ್ಟ ಕೈಕೊಟ್ಟಿತು. ಬ್ಯಾಟ್ ಅಂಚು ಸವರಿದ ಚೆಂಡು ಫೀಲ್ಡರ್ ಬೆನ್ ಸ್ಟೋಕ್ಸ್‌ ಕೈಸೇರಿತು. ನಾಯಕ ವಿರಾಟ್ ಕೊಹ್ಲಿ ತಾವೆದುರಿಸಿದ ಐದನೇ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು. ವಿಕೆಟ್ ಗಳಿಸಿದ ಮೋಯಿನ್ ಅಲಿ ಹಿರಿಹಿರಿ ಹಿಗ್ಗಿದರು.

ರೋಹಿತ್ ಜೊತೆಗೂಡಿದ ರಹಾನೆ ಇಂಗ್ಲಿಷ್ ಆಟಗಾರರ ಹುರುಪಿಗೆ ಕಡಿವಾಣ ಹಾಕಿದರು. ಚಹಾ ವಿರಾಮದವರೆಗೆ ಒಂದೂ ವಿಕಟ್ ಪತನವಾಗದಂತೆ ನೋಡಿಕೊಂಡರು.

47 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ರೋಹಿತ್ ಕೂಡ ತಮ್ಮ ಬಿರುಸಾದ ಹೊಡೆತಗಳಿಗೆ ತುಸು ನಿಯಂತ್ರಣ ಹಾಕಿದರು. ಆದರೂ 91 ರನ್‌ ಗಳಿಸಿದ್ದಾಗ ಒಂದು ಸಿಕ್ಸರ್ ಎತ್ತಿದರು. ಆದರೆ ಶತಕ ಪೂರೈಸಲು ಬೇಕಾದ ಮೂರು ರನ್‌ಗಳನ್ನು ಗಳಿಸುವುದು ಅವರಿಗೆ ಸುಲಭವಾಗಲಿಲ್ಲ. ಪ್ರವಾಸಿ ಬಳಗದ ನಾಯಕ ಜೋ ರೂಟ್ ಅನುಸರಿಸಿದ ಫೀಲ್ಡಿಂಗ್ ತಂತ್ರ ಮತ್ತು ಬೌಲರ್‌ಗಳ ಕೌಶಲದಿಂದಾಗಿ ರೋಹಿತ್ ತಾಳ್ಮೆ ತೋರುವುದು ಅನಿವಾರ್ಯವಾಯಿತು.

ಇದರಿಂದಾಗಿ ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಆಟಗಾರರು, ಗಣ್ಯರ ಗ್ಯಾಲರಿಯಲ್ಲಿ ಕುಳಿದು ಪಂದ್ಯ ವೀಕ್ಷಿಸಿದ ರೋಹಿತ್ ಪತ್ನಿ ರಿತಿಕಾ ಸಜ್ದೆ ಮತ್ತು ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ತುಸು ಒತ್ತಡಕ್ಕೊಳಗಾದರು. ಇನಿಂಗ್ಸ್‌ನಲ್ಲಿ ತಾವೆದುರಿಸಿದ 130ನೇ ಎಸೆತದಲ್ಲಿ ಶತಕ ಪೂರೈಸಿದ ರೋಹಿತ್ ಸಂಭ್ರಮಿಸಿದರು. ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದು ಅಭಿನಂದಿಸಿದರು.

ಹಾಗೆಯೇ ಒಂದು ಹಂತದಲ್ಲಿ ದ್ವಿಶತಕ ಗಳಿಸುವ ಭರವಸೆ ಮೂಡಿಸಿದ್ದ ರೋಹಿತ್, ಚಹಾ ವಿರಾಮದ ನಂತರದ ಆಟದಲ್ಲಿ ಲೀಚ್ ಎಸೆತವನ್ನು ಆಡುವಲ್ಲಿ ಎಡವಿದರು. ಮೋಯಿನ್ ಅಲಿ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು.

ತಾಳ್ಮೆಯಿಂದ ಆಡುತ್ತ 104 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ಶತಕದತ್ತ ಹೆಜ್ಜೆಯಿಟ್ಟಿದ್ದ ರಹಾನೆ ಕೂಡ ರೋಹಿತ್ ನಂತರ ಔಟಾದರು. ಅಲಿ ಎಸೆತದಲ್ಲಿ ಬೌಲ್ಡ್ ಆದರು.

ರಿಷಭ್ ಪಂತ್ (ಬ್ಯಾಟಿಂಗ್ 33) ಮತ್ತು ಅಶ್ವಿನ್ (13 ರನ್) ಭರವಸೆ ಮೂಡಿಸಿದ್ದರು. ಆದರೆ, ಈ ಜೊತೆಯಾಟವನ್ನು ದಿನದಾಟ ಮುಗಿಯುವ ಕೆಲವೇ ನಿಮಿಷಗಳ ಮುನ್ನ ಜೋ ರೂಟ್ ಅವರು ಅಶ್ವಿನ್ ವಿಕೆಟ್ ಗಳಿಸಿದರು. ಪದಾರ್ಪಣೆ ಪಂದ್ಯ ಆಡುತ್ತಿರುವ ಅಕ್ಷರ್ ಪಟೇಲ್ (ಬ್ಯಾಟಿಂಗ್ 5) ಪಂತ್ ಜೊತೆ ಕ್ರೀಸ್‌ನಲ್ಲಿದ್ದಾರೆ.

***

ಅಪ್ಪಟ ಭಾರತೀಯ ಪಿಚ್ ಇದು. ಮೊದಲ ದಿನದಿಂದಲೇ ಚೆಂಡು ತಿರುಗುವುದು ಕಾಣುತ್ತಿದೆ. ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಬ್ಯಾಟಿಂಗ್‌ನ ಹದವಾದ ಮಿಶ್ರಣ ವೇ ಪ್ರಧಾನವಾಗಲಿದೆ

–ಅಜಿಂಕ್ಯ ರಹಾನೆ, ಭಾರತದ ಬ್ಯಾಟ್ಸ್‌ಮನ್

---

ಸ್ಪಿನ್‌ ಆಲ್‌ರೌಂಡರ್ ಅಕ್ಷರ್ ಪಟೇಲ್ ಪದಾರ್ಪಣೆ

ಸೊನ್ನೆ ಸುತ್ತಿದ ಶುಭಮನ್ ಗಿಲ್, ವಿರಾಟ್ ಕೊಹ್ಲಿ

ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ, ಮೊಹಮ್ಮದ್ ಸಿರಾಜ್ ಕಣಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.