ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 22:23 IST
Last Updated 11 ಡಿಸೆಂಬರ್ 2025, 22:23 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣ</p></div>

ಚಿನ್ನಸ್ವಾಮಿ ಕ್ರೀಡಾಂಗಣ

   

ಸುವರ್ಣ ವಿಧಾನಸೌಧ (ಬೆಳಗಾವಿ): ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ ನಡೆಸಲು ಹೇರಿದ್ದ ನಿರ್ಬಂಧವನ್ನು ವಾಪಸ್‌ ಪಡೆದು, ಐಪಿಎಲ್‌ ಪಂದ್ಯಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಗುರುವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾಲ್ತುಳಿತದಲ್ಲಿ 11 ಜನ ಅಸುನೀಗಿದ ನಂತರ ರಾಜ್ಯ ಸರ್ಕಾರವು ಜನಸಂದಣಿ ನಿಯಂತ್ರಣ ಕಾಯ್ದೆಯನ್ನು ರೂಪಿಸಿತ್ತು. ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ನಿರ್ಬಂಧ ಹೇರಿತ್ತು. ಈಗ ಈ ಕಾಯ್ದೆಯ ನಿಯಮಗಳಿಗೆ ಒಳಪಟ್ಟು ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಒಪ್ಪಿಗೆ ನೀಡಿದೆ.

ಕಾಲ್ತುಳಿತ ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಮೈಕಲ್‌ ಕುನ್ಹ ಆಯೋಗದ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಮತ್ತು ಅದರಂತೆ ಕ್ರಮ ತೆಗೆದುಕೊಳ್ಳುವ ಹೊಣೆಗಾರಿಕೆಯನ್ನು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಸಚಿವ ಸಂಪುಟವು ನೀಡಿದೆ.

ಮನವಿ ಸಲ್ಲಿಸಿದ್ದ ಕೆಎಸ್‌ಸಿಎ: ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್‌ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಪಂದ್ಯ ನಡೆಸಲು ಅವಕಾಶ ನೀಡುವಂತೆ ಕೋರಿದ್ದರು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದು ಕರ್ನಾಟಕ ಮತ್ತು ಬೆಂಗಳೂರಿನ ಗೌರವದ ವಿಚಾರ. ಕೆಎಸ್‌ಸಿಎ ಮನವಿಯನ್ನು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.