
ಬೆಕೆನ್‌ಹ್ಯಾಮ್ (ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸ್ಮರಣೀಯವಾಗಿಸಲು ಅನುಕೂಲಕರ ವಲಯದಿಂದ ಹೊರಬಂದು ಪ್ರತಿ ಎಸೆತದಲ್ಲೂ ಹೋರಾಡುವಂತೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಕರೆ ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಆರ್. ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಯುವಕರ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ.
ಜೂನ್ 20ರಂದು ಲೀಡ್ಸ್‌ನಲ್ಲಿ ನಡೆಯುವ ಮೊದಲ ಟೆಸ್ಟ್ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. 2007ರಿಂದ ಭಾರತ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ.
ಈ ಪ್ರವಾಸವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬಹುದು. ನಮ್ಮ ಮೂವರು ಅತ್ಯಂತ ಅನುಭವಿ ಆಟಗಾರರಿಲ್ಲದೆ ಈ ಸರಣಿ ಆರಂಭವಾಗುತ್ತಿದೆ ಅಥವಾ ದೇಶಕ್ಕಾಗಿ ಏನನ್ನಾದರೂ ಸಾಧಿಸಲು ನಮಗೆ ಈ ಅದ್ಭುತ ಅವಕಾಶ ಸಿಕ್ಕಿದೆ ಎಂದು ಭಾವಿಸಬಹುದು ಎಂಬುದಾಗಿ ಗಂಭೀರ್ ಹೇಳಿದ್ದಾರೆ.
ಶುಭಮನ್ ಗಿಲ್ ನೇತೃತ್ವದ ಪ್ರಸ್ತುತ ತಂಡದಲ್ಲಿ ವಿಶೇಷವಾದದ್ದನ್ನು ಸಾಧಿಸಲು ಬೇಕಾದ ಹಸಿವು, ಉತ್ಸಾಹ ಮತ್ತು ಬದ್ಧತೆಯನ್ನು ನೋಡಬಹುದು. ನಮ್ಮ ಅನುಕೂಲಕರ ವಲಯದಿಂದ ಹೊರಬಂದು, ಪ್ರತಿದಿನ, ಪ್ರತಿ ಸೆಷನ್, ಪ್ರತಿ ಗಂಟೆ ಮತ್ತು ಪ್ರತಿ ಎಸೆತದಲ್ಲಿಯೂ ಹೋರಾಡಲು ಪ್ರಾರಂಭಿಸಿದರೆ, ನಾವು ಸ್ಮರಣೀಯ ಪ್ರವಾಸವನ್ನು ಹೊಂದಬಹುದು ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ತಂಡದ ಆಟಗಾರರಿಗೆ ಸ್ವಾಗತ ಕೋರಿದ ಗಂಭೀರ್, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರುವ ಅರ್ಷದೀಪ್, ರೆಡ್ ಬಾಲ್ ಕ್ರಿಕೆಟ್‌ನಲ್ಲೂ ಪ್ರಭಾವಶಾಲಿಯಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿಗೆ ಟೆಸ್ಟ್ ತಂಡದ ನಾಯಕರಾಗಿರುವ ಶುಭಮನ್ ಗಿಲ್ ಅವರಿಗೂ ಸ್ವಾಗತ ಕೋರಿದ ಗಂಭೀರ್, ದೇಶದ ಟೆಸ್ಟ್ ತಂಡವನ್ನು ಮುನ್ನಡೆಸುವುದಕ್ಕಿಂತ ಇನ್ನೊಂದು ಗೌರವ ಇಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.