ವಾಸೀಂ ಅಕ್ರಮ್
ಕೃಪೆ: ರಾಯಿಟರ್ಸ್
ಲಾಹೋರ್: ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಮ್ ಅವರ ವಿರುದ್ಧ ಸೈಬರ್ ಅಪರಾಧ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜೂಜು ಮತ್ತು ಬೆಟ್ಟಿಂಗ್ ಸಂಬಂಧಿತ ಆನ್‌ಲೈನ್ ಆ್ಯಪ್ ಜೊತೆ ನಂಟು ಹೊಂದಿದ್ದ ಕಾರಣ ಅಕ್ರಮ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆ್ಯಪ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಅಕ್ರಮ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮುಹಮ್ಮದ್ ಫಯಾಜ್ ಎಂಬವರು ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆಗೆ (ಎನ್‌ಸಿಸಿಐಎ) ದೂರ ನೀಡಿದ್ದಾರೆ.
ಪಾಕ್ ಕ್ರಿಕೆಟ್ ಜಗತ್ತಿನ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಅಕ್ರಮ್ ಕೂಡ ಒಬ್ಬರು. ಅವರು ವಿದೇಶಿ ಬೆಟ್ಟಿಂಗ್ ಆ್ಯಪ್ 'Baji'ಯ ರಾಯಭಾರಿಯಾಗಿದ್ದಾರೆ ಎಂದು ಫಯಾಜ್ ದೂರಿದ್ದಾರೆ.
'ವಾಸಿಂ ಅಕ್ರಮ್ ಅವರು ಆನ್‌ಲೈನ್ ಆ್ಯಪ್‌ಗೆ ಪ್ರಚಾರ ನೀಡುತ್ತಿರುವ ಪೋಸ್ಟರ್ ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಿಂದಾಗಿ, ಸಾಮಾನ್ಯ ಬಳಕೆದಾರರಲ್ಲಿ ಆ್ಯಪ್ ಕುರಿತ ಆಸಕ್ತಿ ಹೆಚ್ಚಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ಎನ್‌ಸಿಸಿಐಎ ಅಕ್ರಮ್ ವಿರುದ್ಧ ವಿದ್ಯುನ್ಮಾನ ಅಪರಾಧಗಳ ತಡೆ ಕಾಯ್ದೆ 2016ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಒತ್ತಾಯಿಸಿದ್ದಾರೆ.
ಅಕ್ರಮ್ ವಿರುದ್ಧ ದೂರು ಸ್ವೀಕರಿಸಿರುವುದಾಗಿ ಖಚಿತಪಡಿಸಿರುವ ಎನ್‌ಸಿಸಿಐಎ ಅಧಿಕಾರಿಗಳು, 'ಆರೋಪಗಳು ನಿಜವಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಅಕ್ರಮ್ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದೇ ಆ್ಯಪ್‌ಗೆ ಪ್ರಚಾರ ನೀಡಿದ ಆರೋಪದಲ್ಲಿ ಯುಟ್ಯೂಬರ್ ಸಾದ್ ಉರ್ ರೆಹಮಾನ್ ಎಂಬವರನ್ನು ಶನಿವಾರವಷ್ಟೇ (ಆ.16ರಂದು) ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.