ಆಸ್ಟ್ರೇಲಿಯಾ ಆಟಗಾರರು
ಚಿತ್ರ: X / @ICC
ಗಾಲೆ: ಆತಿಥೇಯ ಶ್ರೀಲಂಕಾ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯವನ್ನು 9 ವಿಕೆಟ್ ಅಂತರದಿಂದ ಜಯಿಸಿದ ಆಸ್ಟ್ರೇಲಿಯಾ, ಸರಣಿಯನ್ನು 2–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಂಕಾ, ಮೊದಲ ಇನಿಂಗ್ಸ್‌ನಲ್ಲಿ 257 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಸಿಸ್, ನಾಯಕ ಸ್ಟೀವ್ ಸ್ಮಿತ್ (131 ರನ್) ಹಾಗೂ ಅಲೆಕ್ಸ್ ಕಾರಿ (156 ರನ್) ಗಳಿಸಿದ ಶತಕಗಳ ಬಲದಿಂದ 414 ರನ್ ಗಳಿಸಿತ್ತು.
157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಲಂಕನ್ನರು, 231 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡರು. ಪ್ರವಾಸಿ ಪಡೆಯ ಮ್ಯಾಥ್ಯೂ ಕುನ್ಹಮನ್ ಹಾಗೂ ನೇಥನ್ ಲಯನ್ ತಲಾ ನಾಲ್ಕು ವಿಕೆಟ್ ಪಡೆದರೆ, ಬ್ಯೂ ವೆಬ್ ಸ್ಟರ್ ಎರಡು ವಿಕೆಟ್ ಕಿತ್ತರು.
ಇದರೊಂದಿಗೆ, 75 ರನ್‌ಗಳ ಗುರಿ ಬೆನ್ನತ್ತಿದ ಆಸಿಸ್, 17.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ 20 ರನ್ ಗಳಿಸಿ ಔಟಾದರೆ, ಅನುಭವಿಗಳಾದ ಉಸ್ಮಾನ್ ಖ್ವಾಜಾ (27 ರನ್) ಹಾಗೂ ಮಾರ್ನಸ್ ಲಾಬುಷೇನ್ (26 ರನ್) ಅಜೇಯ ಆಟದ ಮೂಲಕ ಗೆಲುವು ತಂದುಕೊಟ್ಟರು.
ಇದೇ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯವನ್ನು ಸ್ಟೀವ್ ಸ್ಮಿತ್ ಬಳಗ ಇನಿಂಗ್ಸ್ ಹಾಗೂ 242 ರನ್ ಅಂತರದಿಂದ ಗೆದ್ದಿತ್ತು.
ಈ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಅಲೆಕ್ಸ್ ಪಂದ್ಯ ಶ್ರೇಷ್ಠ ಎನಿಸಿದರೆ, ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ ಸ್ಮಿತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಫೈನಲ್‌ನತ್ತ ವಿಶ್ವಾಸದ ಹೆಜ್ಜೆ
3ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯವು ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಇದೇ ಜೂನ್ 11ರಿಂದ 15ರ ವರೆಗೆ ನಡೆಯಲಿದೆ.
ಮೊದಲ ಸಲ ಫೈನಲ್ ತಲುಪಿರುವ ದಕ್ಷಿಣ ಆಫ್ರಿಕಾ ಹಾಗೂ ಸತತ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.
ಸದ್ಯ ಲಂಕಾ ಎದುರು ಕ್ಲೀನ್ ಸ್ವೀಪ್ ಸಾಧಿಸಿರುವುದು ಆಸ್ಟ್ರೇಲಿಯನ್ನರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.